Thursday, 22 December 2016

ಇದೊಂಥರ ಭಯ

                ಮೊನ್ನೆ ನಮ್ಮ ಮನೆಗೆ ನನ್ನ ಸ್ವಲ್ಪ ದೂರದ ಸಂಬಂಧಿಕರು ಮದುವೆಗೆ ಕರೆಯೋಲೆ ಕೊಡಲು ಬಂದಿದ್ದರು. ಮೂರು ಜನರು ಲಗ್ನ ಪತ್ರಿಕೆ ಹಂಚಲು ಹೋಗಬಾರದೆಂಬ ನಂಬಿಕೆಯಿಂದ  ನಾಲ್ಕು  ಜನರಿದ್ದ ಟೀಮು ನಮ್ಮ ಮನೆಗೂ ಬಂದಿದ್ದರುಮೂರು ಹೆಂಗಸರು ಮತ್ತು ಒಬ್ಬ ಗಂಡಸು ಅಥವಾ ಮೂವರು ಹೆಂಗಸರನ್ನು ತನ್ನ ಕಾರಿನಲ್ಲಿ ಗಂಡಸು ಡ್ರೈವ್ ಮಾಡಿಕೊಂಡು ಬಂದಿದ್ದ. ಅವರ ಹೆಸರು ಅವರ ಹೆಸರು  ಹೇಳುವ ಅವಶ್ಯಕತೆಯಿಲ್ಲ ಬಿಡಿ.


          ಅವರಲ್ಲಿದ್ದ  ಒಬ್ಬ ಹೆಂಗಸು ಮಾತ್ರ ಬಹಳ ಸ್ವಾರಸ್ಯಕರವಾಗಿ ಮಾತನಾಡುತ್ತಿದ್ದರು. ಮಕ್ಕಳು, ನೆಂಟರು , ಇತ್ಯಾದಿ ಇಷಯಗಳ ಉಭಯ ಕುಶಲೋಪರಿಗಳನ್ನು ಮಾತನಾಡುತ್ತ, ಆಗಿ ಪ್ರತಿಯೊಂದು ವಿಷಯಕ್ಕೂ ' ಅದಕ್ಕೆ ನಂಗೆ ಒಂಥರಾ ಭಯ ' ಎಂದು ಪದೇ ಪದೇ ಹೇಳುತ್ತಿದ್ದರು.  ನಿಮಗೆ ಅರ್ಥವಾಗಲಿಲ್ಲ ಅಂತ ಕಾಣುತ್ತೆ. ಸ್ಪಷ್ಟ್ವವಾಗಿ ಹೇಳೇಬಿಡ್ತೀನಿ, ಬಿಡಿ . ' ಯಾರೇ ಗಟ್ಟಿಯಾಗಿ ಮಾತನಾಡಲಿ ನನಗೆ ಒಂಥರಾ ಭಯ '  ಎಂದು ಪ್ರಾರಂಭವಾದದ್ದು  ಜ್ಞಾಪಕ.'  ಆಮೇಲೆ ಮನೆಗೆ ಮಕ್ಕಳು ಸಮಯಕ್ಕ ಮನೆಗೆ ಬರಲಿಲ್ಲ ಎಂದರೆ ಇದೊಂಥರ ಭಯ ಶುರುವಾಗುತ್ತೆ ' . ' ಟಿವಿಯಲ್ಲಿ ಕೆಳಭಾಗದಲ್ಲಿ ಅಪಘಾತ , ಸಾವು ...ಹೀಗೆ ಸಾಲುಗಳು ಬರುತ್ತಿದ್ದರೆ , ನಮ್ಮ ಯಜಮಾನರು ಮನೆಗೆ ಇನ್ನು ಬರದಿದ್ದರೆ ಇದೊಂಥರಾ ಭಯ ಆಗುತ್ತೆ ', ' ಈ ಪರೀಕ್ಷೆಗಳನ್ನು ಬರೆದು  ಇಂಜಿನಿಯರ್ ಸೀಟು ಸಿಗುತ್ತಾ ಅನ್ನೋದು ಇನ್ನೊಂಥರ ಭಯ ", ' ಯಜಮಾನರು ನಾನು ಮಾಡಿದ ಅಡುಗೆ ಸ್ವಲ್ಪ ಹೆಚ್ಚು ಕಡಿಮೆಯಾಗಿ ಊಟ ಮಾಡದೇಯಿರೋದೇ  ಇನ್ನೊಂಥರ ಭಯ '. ಇತ್ಯಾದಿ ಥರಾ ಥರಾ ಭಯದ  ವಾತಾವರಣ ಪರಿಚಯಿಸುತ್ತಿದ್ದರು.


          ನನಗೆ ಅನುಮಾನ . ಭಯ ಎಂದರೆ ಅದರಲ್ಲಿಯೂ ಪಂಗಡಗಳು, ವಿಧಗಳು ಇತ್ಯಾದಿ ಇದೆಯಾ ಎಂದು. ಇದೆ ಎಂದರೆ ಇದೊಂಥರಾ ಭಯ ಶುರುವಾಯ್ತು.

Wednesday, 4 November 2015

ತಲೆ ಮೇಲೆ ಕೈ...


                   ಈ ಶೀರ್ಷಿಕೆ ನೋಡಿ ಯಾವುದೋ ಪ್ರಬಂಧ ಬರೆಯುತ್ತಿದ್ದೇನೆ ಅಂದುಕೊಳ್ಳಬೇಡಿ ಅಥವಾ ನೀವೇ ನಿಮ್ಮ ತಲೆ ಮೇಲೆ ಕೈಯಿಟ್ಟುಕೊಳ್ಳಬೇಡಿ.
                        ಕಳೆದ ವರ್ಷ ನಮ್ಮ ಸ್ನೇಹಿತನೊಬ್ಬ ವ್ಯಾಪಾರಕ್ಕೋಸ್ಕರ ಯಾರಿಗೋ ಬಡ್ಡಿಗೆ ಹಣ ಕೊಟ್ಟನಂತೆ, ಅದೂ ಮೀಟರ್ ಬಡ್ಡಿ ಲೆಕ್ಕವಂತೆ. ಅವನ ಸಾಲಗಾರನೊಬ್ಬ ಅಲ್ಪ ಸ್ವಲ್ಪ ಬಡ್ಡಿ ಕೊಟ್ಟು ಅಸಲು ಆಮೇಲೆ ಕೊಡಬೇಕೆನ್ನುವವನು ಬೆಳ್ಳಂಬೆಳಿಗ್ಗೆ  ಮಾರ್ಕೆಟ್  ಹತ್ತಿರ ಯಾವುದೋ ಲಾರಿಗೆ ಸಿಕ್ಕಿ ಅಲ್ಲೇ ಸತ್ತನಂತೆ. ವಿಷಯ ತಿಳಿದ ಕೂಡಲೇ ನನ್ನ ಸ್ನೇಹಿತ ತಲೆ ಮೇಲೆ ಕೈಯಿಟ್ಟುಕೊಂಡು ಗೋಳೋ ಎಂದು ಅವನ ಹೆಂಡತಿ ಮುಂದೆ ಅತ್ತು ಬಿಟ್ಟನಂತೆ. ಅವಳು ಬಹುಷಃ ಅವರ್ಯಾರೋ ಬಾಲ್ಯ ಸ್ನೇಹಿತರೋ ಇಲ್ಲ ತೀರ ಹತ್ತಿರದ ಸ್ನೇಹಿತರು ಇರಬಹುದು ಎಂದುಕೊಂಡು) ಎಷ್ಟೇ ಸಮಾಧಾನ ಮಾಡಿದರೂ ಸುಧಾರಿಸಲ್ಲಿಲ್ಲವಂತೆ.  ಅವಳಿಗೆ ವಿಷಯ ತಿಳಿಸಿ " ಅವನು ಸತ್ತಿದ್ದಕ್ಕೆ ಅಳುತ್ತಾ ಇಲ್ಲವೇ, ನಾನು ಕೊಟ್ಟ ಹಣ ವಾಪಸ್ಸು ಬರಲ್ಲ. ಹಣ ಕೊಟ್ಟಿದ್ದಕ್ಕೆ ಯಾವುದೇ ಸಾಕ್ಷಿ / ದಾಖಲೆ ತೆಗೆದುಕೊಳ್ಳಲಿಲ್ಲ. ಇನ್ನು ನನ್ನ ಸಂಸಾರವನ್ನು ಹೇಗೆ ಸಾಗಿಸಲಿ ಎಂದು ಗೋಳೋ ಅಂತ ಅತ್ತು ಬಿಟ್ಟನಂತೆ. ಅವನ ಹೆಂಡತಿ ಅವಳ ತಲೆ ಮೇಲೆ ಕೈಯಿಟ್ಟುಕೊಂಡಳಂತೆ. ಇದೇನ್ಯ್ ಹೊಸ ವಿಚಾರ ಅಲ್ಲವೇ ಅಲ್ಲ ಬಿಡಿ.
                         ಆದರೆ ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಬೇಕು? ನೀವು ಯಾವಾಗಲಾದರೂ ನಮ್ಮ ತಲೆ ಮೇಲೆ ಕೈಯಿಟ್ಟುಕೊಂಡಿದ್ದೀರಾ!!  ತಕ್ಷಣ ನೆನಪಿಗೆ ಬರಲಿಲವೇ ? ಹಾಗಾದರೆ ನಿಮ್ಮ ತಲೆ ಮೇಲೆ ಕೈಯಿಟ್ಟುಕೊಂಡು  ಯೋಚಿಸಿ... ನೆನಪಿಗೆ ಬರಬಹುದು.

Thursday, 29 January 2015

ಸಾಯೋಕಾಲದಲ್ಲಿ ಆಗುವವನೇ ಬಾಂಧವ ಅಲ್ಲ ನರ್ಸ್...


                            ಆಶ್ಚರ್ಯವಾಗಬಹುದು  ನಿಮಗೆ ...ಏನು  ಹೀಗೆ ಬರೆದಿದ್ದಾರಲ್ಲ ಎಂದು ಅನಿಸುತ್ತಿರಬಹುದು, ಹಳೇ ಗಾದೆಯನ್ನು ಹೆಚ್ಚಾಗಿ ಬಳಸುತ್ತಿದ್ದುದು  ಮಧ್ಯ ಮತ್ತು ಮುಪ್ಪಿನ ವಯಸ್ಸಿನವರು. ಅವರಿಗೆ ಅದೇ ಚಿಂತೆ. ಸಾಯುವಾಗ ಜೊತೆಗೆ ಯಾರು ಇರುತ್ತಾರೋ , ಹೆಂಡತಿಯೋ ! ಮಕ್ಕಳೋ! ಮೊಮ್ಮಕ್ಕಳೋ! ಮರಿ ಮಕ್ಕಳೋ! ನೆರೆ ಹೊರೆಯವರೋ!  ಇತ್ಯಾದಿ..  ಇದರ ನಂತರ ಹೆಚ್ಚು ಜನರು ಯೋಚಿಸುವುದು ಕಡಿಮೆ. ಇದೆಲ್ಲಾ  ಹಳ್ಳಿಯ ಅಥವಾ ಗ್ರಾಮೀಣ ಜನರು  ಯೋಚಿಸುವ ರೀತಿ ಎಂದು ತಿಳಿಯಬೇಡಿ. ಅಥವಾ ಹಳೆಯ ಮಾತು ಎಂದು ಭಾವಿಸಬೇಡಿ.
                     ಈಗ ಪರಿಸ್ಥಿತಿ ಹಾಗೂ ಸಮಾಜದಲ್ಲಿ ಬದಲಾವಣೆ  ಅನಿವಾರ್ಯವಾಗಿದೆ. ಮನೆಯವರ ಒತ್ತಡ ಇಲ್ಲವೇ ವಿಮಾ ಪ್ರಭಾವದ ಕಾರಣದಿಂದ ಸಾಯೋ ಸಮಯ ಅಥವಾ ಕಾಯಿಲೆ ತೀವ್ರವಾದಾಗ ಆಸ್ಪತ್ರೆ ಸೇರುವುದು ಸಾಮಾನ್ಯವಾಗಿದೆ. ಇಲ್ಲವೇ ಮನೆಯಲ್ಲಿಯೇ ನರ್ಸ್ ರವರ ಸೇವೆ ಪಡೆಯುವ ಕಾಲ ಬಂದಿದೆ. ಆಸ್ಪತ್ರೆಯಲ್ಲಿಯೂ ಕೂಡ  ಸಾಯುವವರನ್ನು ಸಂಬಂಧಿಕರು ನೋಡುವ ಹಾಗಿಲ್ಲ ಏಕೆಂದರೆ ಅವರನ್ನು ಐ ಸಿ ಯು (ICU)  ಘಟಕದಲ್ಲಿ ಪರದೆಗಳ ಮಧ್ಯದಲ್ಲಿ, ಕೊಳವೆಗಳ ಮತ್ತು ಮಷಿನ್ನಗಳನ್ನು ಆವರಿಸಿಕೊಂಡು ಬಿದ್ದಿರುತ್ತಾರೆ. ಆಗಾಗ  ನೋಡುವುದೇ ನರ್ಸ್ ಮಾತ್ರ  ಮತ್ತು ಅವಳೇ ಸುದ್ದಿ   ಅಲ್ಲ,  ತಪ್ಪು ಮರಣ ವಾರ್ತೆ ಡಾಕ್ಟರಿಗೆ ಮುಟ್ಟಿಸುವುದು. ನಂತರ  ಇತರರಿಗೆ ತಿಳಿಸುವುದು. ಕೆಲವೂಮ್ಮೆ ವ್ಯಕ್ತಿ ಸಾಯುವಾಗ ನರ್ಸ್ ಅವನ ಕೈಯನ್ನು ಹಿಡಿದಿರುತ್ತಾಳೆ. ಆದ ಕಾರಣ ಸಾಯೋಕಾಲದಲ್ಲಿ  ನೆರವಾಗುವವರೇ ನರ್ಸ್ ಗಳು, ಬಾಂಧವರಲ್ಲ. ಇದೇ ಪರಿಸ್ಥಿತಿ ಹಳ್ಳಿಯ ಆಸ್ಪತ್ರೆಗಳಲ್ಲೂ  ಉಂಟಾಗಿದೆ.
                 ನಿಮ್ಮಲ್ಲಿ  ಕೆಲವರಿಗೆ ಏನಾದರೂ ಆಸೆಯಿದ್ದು ನರ್ಸ್ ನ್ನು ನೋಡಿಕೊಂಡು  ಸಾಯಬೇಕೆನಿಸಿದರೆ ಈಗಲೇ ನಿಮ್ಮ ಹುಡುಕಾಟ ಶುರುಮಾಡಿಕೊಳ್ಳಿ  , ಸಾಧ್ಯವಾದರೆ ಕೊನೆಯ ಆಸೆಯೆಂದು ಚೀಟಿಯಲ್ಲಿ ಬರೆದಿಟ್ಟುಕೊಂಡಿರಿ  ..ಏಕೆಂದರೆ ಸಾಯುವಾಗಲಾದರೂ ನಿಮ್ಮ ಆಸೆ ಪೂರೈಸಬೇಡವೇ???  
Monday, 24 November 2014

ಮುದುಕರಾದರೂ ಮೀಸೆ ಹಣ್ಣಾಗುವುದಿಲ್ಲ....

            ಒಂದು ಗಾದೆ ಮಾತಿನಂತೆ " ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ " ಎಂದು. ಇದು ಕುಸ್ತಿ ಮಾಡುವ ಜಟ್ಟಿಯ ಚಾಕ್ಯತೆ, ಚಾಣಾಕ್ಷತನವನ್ನು ತೋರಿಸುತ್ತಿತ್ತು. ಕಾಲ ಬದಲಾಗಿದೆ ಜಟ್ಟಿಯು ಮೀಸೆ ಬಿಡುವುದಿಲ್ಲ ಬದಲಿಗೆ ಮೀಸೆಯನ್ನು ನುಣ್ಣಗೆ ಕ್ಷೌರ ಮಾಡಿಸುತ್ತಾನೆ ಮತ್ತು ಮಣ್ಣಿನ ವಾಸನೆಯೇ ಕುಸ್ತಿಯಲ್ಲಿಲ್ಲ. ಈಗ ಹಲಗೆಗಳ ರಂಗ ಮಂಚ ಅಥವಾ ಬಟ್ಟೆಯ ಮಂಚದ ಜಾಗ. ಇನ್ನೂ ಕೆಲವು ವರ್ಷಗಳಲ್ಲಿ ಈ ಗಾದೆಯ ಮಾತು ಉಪಯೋಗಕ್ಕೆ ಬರುವುದಿಲ್ಲ ಎನ್ನೋಣ.

               ಆದರೆ ಮತ್ತೊಂದು ರೀತಿಯಲ್ಲಿ ಈ ಗಾದೆಗೆ ಸೇರಿಸಿಕೊಳ್ಳಬಹುದು. ಅದೇನೆಂದರೆ " ಮುದುಕರಾದರೂ  ಮೀಸೆ ಹಣ್ಣಾಗುವುದಿಲ್ಲ..." ಎಂದು. ಕಾರಣವೇನೆಂದರೆ ಸುಲಭವಾಗಿ ಎಲ್ಲಾ ಅಂಗಡಿಗಳಲ್ಲೂ ಕಡಿಮೆ ದರದಲ್ಲಿ ಎಲ್ಲರಿಗೂ ದೊರೆಯುವ ಕೂದಲಿಗೆ ಹಚ್ಚುವ ಬಣ್ಣಗಳು ಮತ್ತು ಸುದೀರ್ಘವಾಗುತ್ತಿರುವ ಆಯಸ್ಸು. ಇವೆರಡಕ್ಕೂ ರಸಿಕತೆ ಸ್ವಲ್ಪ ಇರಲೇಬೇಕು ಎನ್ನಿ. ತಲೆಯಲ್ಲಿ  ಶೇಕಡ ಎಂಬತ್ತರಷ್ಟು ಕೂದಲುಗಳು ಮಾಯವಾಗಿ ಬಟ್ಟ ಬಯಲಾದ ಮುದುಕರಲ್ಲೂ ಕೂಡ ಮೂಗಿನ ಕೆಳಗೆ ದಪ್ಪಗೆ ಮೀಸೆಯಂತೂ ರಾರಾಜಿಸುತ್ತದೆ. ಈ  ಮೀಸೆಯನ್ನು ಆರೈಕೆ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ ಆದರೆ ಅಂದವಾಗಿ ಕಾಣಲು ರಸಿಕತೆ ಬೇಕೇಬೇಕು.

             ಹಲವು ಯುವಕ ಮುದುಕರೂ ಹಾಗೂ ಹಣ್ಣಾದ ಮುದುಕರೂ ಕೂಡ ಮೀಸೆಯು ಬೆಳ್ಳಗೆ ಕಾಣಲು ಇಷ್ಟ ಪಡುವುದಿಲ್ಲ. ಈ ಕಾರಣದಿಂದ ಮೀಸೆಗೆ ಬಣ್ಣ ಹಚ್ಚುವುದರಿಂದ ಈ ಮುದುಕರಿಗೆ ಮೀಸೆ ಹಣ್ಣಾಗುವುದಿಲ್ಲ.... ಎಂಬ ನಂಬಿಕೆ.  ನಿಮಗೂ ಹೀಗೆ ಅನಿಸುತ್ತಿದೆಯಾ?


ಅವನೊಬ್ಬ ಮುಂಡೆಗಂಡ.........


                         ಮೊದಲು ಹಿರಿಯರು ಉಪಯೋಗಿಸುತ್ತಿದ್ದ ಶಬ್ಧಗಳೆಂದರೆ ಅಥವಾ ಬೈಗುಳವೆಂದರೆ " ಮುಂಡೆಗಂಡ", " ಮುಂಡೆಮಗನೆ" ಎಂಬುದು ಸಾಮಾನ್ಯವಾದವುಗಳು. ಈ ಬೈಗುಳಗಳನ್ನು ವಿದ್ಯಾವಂತರು, ಕಲಿತವರು, ಮರ್ಯಾದೆಯಿಂದ ಮಹಿಳೆಯರು ಹೆಚ್ಚಾಗಿ ಬಲಸುತ್ತಿದ್ದರು. ಇನ್ನಿತರರು ಬಳಸುತ್ತಿದ್ದುದು " ಬೋ.....ಮಗನೆ, ಸೂ...ಮಗನೆ...." ಇತ್ಯಾದಿಗಳು.
                          ಈ ಶಬ್ಧಗಳಿಗೆ ಅರ್ಥವಿರುವಿದೇನೋ ನಿಜ. ಆದರೆ ಮೇಲೆ ತಿಳಿಸಿದ ಜನರು ತಿಳುವಳಿಕೆಯುಳ್ಳವರಾದ ಕಾರಣ  ನಿಜವಾಗಿ ಅರ್ಥ ಚೆನ್ನಾಗಿ ತಿಳಿದಿರುತ್ತದೆ. ಮುಂಡೆಗೆ ಗಂಡನಾಗುವುದು ಅನೈತಿಕ ಸಂಬಂಧ ಎಂದಾದರೆ ಈ ಜನರಿಗೆ ಹೇಗೆ ತಿಳಿಯಿತು ಇವನು ಮುಂಡೆಗಂಡ ಎಂದು? ಇದನ್ನು ಜನರು ನೋಡಿರಲೇ ಬೇಕಲ್ಲ! ಹೀಗಾಗಿ ಇದು ಅಸೂಯೆಯ ಮಾತೋ , ಬೈಗುಳದ ಮಾತೋ ಅವರಿಗೇ ಗೊತ್ತು?  ಇನ್ನೊಂದು ವಿಷಯವೆಂದರೆ ಸಮಾಜದ  ದೃಷ್ಟಿಯಲ್ಲಿ ಮುಂಡೆಗೆ  ಗಂಡನಾಗುವ ಈ ಅನೈತಿಕನನ್ನು ಯಾಕೆ ತಡೆಯಲಿಲ್ಲ? ಬೈಯ್ಯುವುದಕ್ಕೆ ಉಪಯೋಗವಾಗುತ್ತದೆ ಎಂದು ಅವನನ್ನು ಹಾಗೇ ಬಿಟ್ಟರೇ?

               ಕಾಲ ಬದಲಾಗಿದೆ ಮತ್ತು  ಈ ಬೈಗುಳ ಶಬ್ಧಗಳು ಮೂಲೆ ಸೇರುತ್ತಿವೆ. ಕಾರಣ ತಿಳಿಯುವುದು ಕಷ್ಟ. ಬಹುಶ ಶಬ್ಢಕ್ಕೆ ಅರ್ಥವಿಲ್ಲವೇನೋ ಅಥವಾ ಸಮಾಜ ಪರಿವರ್ತಿತವಾಯಿತೇನೋ ಅಲ್ಲವೇ? ಉತ್ತರ ಯಾರು ಹೇಳುತ್ತೀರಿ?

Monday, 30 September 2013

ಅಂಗವಿಕಲರೇ!

ಸುಮಾರು ದಿವಸದಿಂದ ಜಯನಗರ ನಾಲ್ಕನೇ ಬ್ಲಾಕ್ ನಲ್ಲಿ ಒಂದು ಬೋರ್ಡ್ ಬರಹ ನನ್ನ ಗಮನಕ್ಕೆ ಬಂದಿತ್ತು. ಅದೇನೆಂದರೆ ಟೆಲಿಪೋನ್ ಬೂತ್ ನ ಬರಹವೇನೆಂದರೆ ಅಂಗವಿಕಲ ಟೆಲಿಪೋನ್ ಬೂತ್ ಎಂದು. ಹತ್ತಿರದಿಂದ ಗಮನಿಸಿದೆ ಯಾರೋ ಒಬ್ಬ ವ್ಯಕ್ತಿ ಕುಳಿತಿದ್ದ ಮತ್ತು ಒಂದು ಪೋನ್ ಕೂಡ ಇತ್ತು. ಬಹುಷಃ ಅವನೇ ಅಂಗವಿಕಲನಿರಬಹುದೆಂದು ತಿಳಿದೆ. ಇದೇನೂ ಅಂತಹ ದೊಡ್ಡ ವಿಷಯ ಅಲ್ಲ. ಕೆಲವು ತಿಂಗಳಿಂದ ಆ ಬೂತ್ ಮುಚ್ಚಿದೆ. ಆ ಬೂತ್ ನ ಮೇಲೆ ಮತ್ತೊಮ್ಮೆ ನೋಡಿದೆ. ಅದೇ ಬರಹ . ಆದರೆ ಏನಾಯಿತೋ ಗೊತ್ತಿಲ್ಲ. ಅಂಗ ವಿಕಲ ಟೆಲಿಪೋನ್ ಬೂತ್ ಮಾತ್ರ ಇದ್ದದ್ದು ಇನ್ನೊಂದು ಸಲ ಓದಿಕೊಂಡೆ. ಈಗ ತಿಳಿಯಿತು, ಇಲ್ಲಿ ಎರಡು ಅಂಗವಿಕಲಗಳಿವೆ ಎಂದು. ಮೊದಲನೆಯದು ಬೂತ್ ನಡೆಸುತ್ತಿದ್ದ ವ್ಯಕ್ತಿ ಅಂಗವಿಕಲನಾದರೆ ಎರಡನೆಯದು ಅಂಗವಿಕಲ ಪೋನ್ ಇರಬಹುದೆಂದು ನನ್ನ ಅನಿಸಿಕೆ. ಈಗ ಎರಡೂ ಕೆಲಸ ಮಾಡುತ್ತಿಲ್ಲವೇನೊ? ಈಗ ಯಾವುದಾದರೂ ಸ್ಕೀಮ್ ಬಂದಿರಬಹುದೇ ಎಂದು? ಅಂಗವಿಕಲರಿಗೆ ಅಂಗವಿಕಲ ಸೆಟ್ ಗಳನ್ನೇ ಕೊಡಬಹುದೆಂಬುದು. ಇದು ನಿಮಗೇನಾದರು ಗೊತ್ತಾ?

Saturday, 27 April 2013

ಕನ್ನಡಿಯಲ್ಲಿ ನಿಮ್ಮ ಮುಖ ನೋಡಿ.....

         ನಾನು ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಗಮನಿಸಿದ ಹಾಗು ಹಲವು ಸಲ ನೋಡಿ ಮನಸ್ಸಿನೊಳಗೇ ನಗುತ್ತಿದ್ದುದು ಇದೆ. ಅದರಲ್ಲೂ ಹದಗು ಪ್ರಯಾಣದ ರೈಲುಗಳಾದರೆ ಅದರಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಇರುವ ಕಾರಣ ರೈಲಿನಲ್ಲಿ ನಿಮಗೆ ಬಿಟ್ಟಿ ಮನರಂಜನೆ ಸಿಗುವುದು ಎಓದು ನನ್ನೆ ಅನಿಸಿಕೆ.

           ರೈಲಿನ ಕೋಚಿನ ಅಥವಾ ಬೋಗಿ ಎರಡೂ ತುದಿಯಲ್ಲಿ ಟಾಯ್ಲೆಟ್ ಮೊದಲು ಕನ್ನಡಿ ಮತ್ತು ಕೈ ತೊಳೆಯಲು ( ಏನು ಬೇಕಾದರೂ ತೊಳೆಯಬಹುದು) ನೀರಿನ ವ್ಯವಸ್ಥೆ ಮತ್ತು ಸಿಂಕು ಇರುತ್ತದೆ. ಈ ಕನ್ನಡಿಯೇ ನನ್ನೆ ಮನರಂಜನೆಗೆ ಮುಖ್ಯ ವಸ್ತು. ರೈಲು ಹತ್ತುವಾಗ ಹೆಚ್ಚು ಜನ ಕನ್ನಡಿಯ ಬಗ್ಗೆ ಗಮನ ಹರಿಸಲು ಹೋಗುವುದಿಲ್ಲ. ಆದರೆ ಜನರು ಇಳಿಯುವಾಗ ಶೇಕಡ ತೊಂಬತ್ತರಷ್ಟು ಮಂದಿ ಕನ್ನಡಿಯಲ್ಲಿ ತಮ್ಮ ಮುಖ ದರ್ಶನ ಮಾಡಿಯೇ ಕೆಳಗಿಳಿಯುತ್ತಾರೆ, ಅದೂ ಕೆಲವೇ ಕ್ಷಣಗಳು ಮಾತ್ರ. ಆದರೆ ರೈಲು ಚಲಿಸಿತ್ತಿರುವಾಗೆ ಪಡ್ಡೆ ಹುಡುಗರು ಮತ್ತು ಯುವ ಪ್ರಾಯದವರು ತಮ್ಮನ್ನು ಕನ್ನಡಿಯಲ್ಲಿ ನೋಡಿಕೊಳ್ಳುವುದನ್ನು ಗಮನಿಸುತ್ತಿದ್ದರೆ ನೀವು ತುಂಬೆ ಮನಸ್ಸಿನಿಂದ ಮನರಂಜಿಸಿಕೊಳ್ಳಬಹುದು. ನಾನು ಗಮನಿಸಿದ ಹಾಗೆ ಹೆಚ್ಚು ಯುವಕರು ಒಂದೇ ರೀತಿ ಕನ್ನಡಿಯ ಮುಂದೆ ನಡೆದುಕೊಳ್ಳುವುದು. ಮೊದಲಿಗೆ ತಮ್ಮ ತಲೆಕೂದಲನ್ನು ಸರಿ ಮಾಡಿಕೊಳ್ಳುತ್ತಾರೆ. ಕೆಲವರು ಮುಂದಿನ ಕೂದಲನ್ನು ಹಿಂದಕ್ಕೆ ತಳ್ಳಿಕೊಂಡರೆ , ಕೆಲವರು ಕೂದಲನ್ನು ಒತ್ತಿ ಒತ್ತಿ ಅಥವಾ ಕೈ ಬೆರಳಿನಿಂದ ತೀಡಿಕೊಂಡು ಒಂದು ರೂಪಕ್ಕೆ ತರಿಸಿಕೊಳ್ಳುತ್ತಾರೆ.

          ಮುಂದಿನ ಹಂತವೇ ಸ್ವಾರಸ್ಯಕರ . ಮೊದಲಿಗೆ ಮುಖ ಸರಿಯಾಗಿರಿಸಿಕೊಂಡು ನೋಡಿಕೊಳ್ಲುತ್ತಾರೆ ನಂತರ ಕಿರುನಗೆಯನ್ನು ತುಟಿಯಲ್ಲಿ ಮಾಡಿಕೊಳ್ಳುತ್ತಾರೆ. ಹಾಗೆ ಮುಂದುವರಿಸಿಕೊಂಡು ಮಖವನ್ನು ಓರೆಯಾಗಿ ಮಾಡಿಕೊಂಡು ತಾನು ನಕ್ಕರೆ ಹೇಗೆ ಕಾಣುತ್ತಿರುವೆನೆಂದು ನೋಡಿಕೊಳ್ಳುವುದು. ಇದಾದ ತಕ್ಷಣ ಕೆಲವರಲ್ಲಿ ಅನುಮಾನ ಮೂಡಿದ ಹಾಗೆ ಕನ್ನಡಿಯ ಮುಂದಕ್ಕೆ ವಾಲಿಕೊಂಡು ಹಲ್ಲುಗಳನ್ನು ಪರೀಕ್ಷಿಸಿಕೊಳ್ಳುವುದು. ಎರಡೂ ದಂತಪಂಕ್ತಿಯನ್ನು ನೋಡಿಕೊಂಡು ತುಟಿಯನ್ನು ವಿಚಿತ್ರ ರೀತಿಯಲ್ಲಿ ಮಾಡುವುದನ್ನು ನೀವು ದೂರದಿಂದಲೇ ಗಮನಿಸಿದರೆ ನೀವೂ ಕೂಡ ಮನಸ್ಸಿನಲ್ಲಿ ನಗದೇ ಇರಲಾರಿರಿ. ಮುಂದಿನ ಹಂತವೇ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳುವುದು ಅರ್ಥಾತ್ ನೋಡಿಕೊಳ್ಳುವುದು. ಮೊದಲಿಗೆ ಕಣ್ಣುಗಳನ್ನು ಅಗಲ ಮಾಡಿ , ನಂತರ ಕಿರಿದು ಮಾಡಿ, ವಾರೆಗಣ್ಣು ಮಾಡಿ ನೋಡಿದ ಮೇಲೆಯೇ ಎನೋ ಒಂದು ರೀತಿಯ ತೃಪ್ತಿ ಆ ವ್ಯಕ್ತಿಗೆ.

             ಇಲ್ಲಿ ಗಮನಿಸಬೇಕಾದದ್ದು ಒಂದು ವಿಷಯವೆಂದರೆ ಕನ್ನಡಿಯ ಮುಂದೆ ನಿಂತಾಗ ಅವನು ಯಾವುದೇ ಅಡಚಣೆಯಿಲ್ಲದಿದ್ದಾಗ ಮಾತ್ರ ಈ ಶೃಂಗಾರ. ಹಲವರು ತನ್ನ ಸುತ್ತಮುತ್ತ ಇದ್ದರೂ ಕ್ಯಾರೇ ಎನ್ನುವುದಿಲ್ಲ. ತನ್ನನ್ನು ಯಾರೂ ಗಮನಿಸುತ್ತಿಲ್ಲ ಎಂಬುದು. ಆದರೆ ವಾಸ್ತವವಾಗಿ ನನ್ನಂತಹ ಹಲವೆ ಜನರು ಪೇಪರ್ ಓದಿದ ಮೇಲೆ, ಪತ್ರಿಕೆಗಳನ್ನು ತಿರುವಿಹಾಕಿದ ಮೇಲೆ, ಸುಮ್ಮನೆ ಟೈಂ ಪಾಸ್ ಗೆ ಅಲ್ಲಿ ಇಲ್ಲಿ ನೋಡುತ್ತಿರುವಾಗ ದೂರದಿಂದ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಬಹುದು. ನಾವು ಆ ವ್ಯಕ್ತಿಯ ಹಿಂದೆ ಇರುವ ಕಾರಣ ಅವನ ಮುಖದ ಚಲನವಲನಗಳನ್ನು ದರ್ಶನ ನಮಗೆ ಲಭ್ಯವಾಗಿ ಪುಕ್ಕಟೆ ಮನರಂಜನೆ ಕೊಡುತ್ತದೆ. ಹೆಂಗಸರು ಈ ರೀತಿ ನಡೆದುಕೊಳ್ಳುವುದು ಅಪರೂಪ.

              ಮುಂದಿನ ಸಲ ಕನ್ನಡಿಯಲ್ಲಿ ನಮ್ಮ ಮುಖ ದರ್ಶನದ ಜೊತೆಗೆ ಕನ್ನಡಿಯ ಕಡೆಗೇ ಇನ್ನೂ ಯಾರದಾದರು ಮುಖವಿದೆಯೆ ಎಂದು ಕನ್ನಡಿಯಲ್ಲೇ ಗಮನಿಸಿ. ಇಲ್ಲದಿದ್ದರೆ ನೀವು ಪುಕ್ಕಟೆ ಮನರಂಜನೆಗೆ ಒಂದು ವಸ್ತುವಾಗುವಿರಿ.