Wednesday, 25 July 2012

ಗಜ ಸೀರೆ

                              ಅಂಗಡಿಯಲ್ಲಿ ನನ್ನ ಹೆಂಡತಿ ಸೀರೆ ಖರೀದಿ ಮಾಡುತ್ತಿರುವಾಗ ಇನ್ನೊಬ್ಬ ಹೆಂಗಸು "ಸೀರೆಯಲ್ಲೇ ಬ್ಲೌಸ್ ಪೀಸ್ ಇರೋದು ಕೊಡಿ" ಎಂದು ಅಂಗಡಿಯವನನ್ನು ಕೇಳುತ್ತಿದ್ದಳು. ಅದೇನು ಆಶ್ಚರ್ಯವಲ್ಲ ಬಿಡಿ. ಆದರೆ ಆಕೆಯ ಜಾಣ್ಮೆಯನ್ನು ನಾನು ಮೆಚ್ಚಿದೆ. ಏಕೆಂದರೆ ಅವಳು ಕೇಳುತ್ತಿದ್ದುದು ಬ್ಲೌಸ್ ಪೀಸ್ ಕೂಡ ಸೀರೆ ತರನೇ ಇರಬೇಕು, ಬೇರೆ ಅಲಂಕಾರ ಇರಬಾರದು ಎಂದು. ಅವಳು ತೀರ ಸಪೂರವಾಗಿದ್ದಳು( ಸಣ್ಣಗಿದ್ದಳು).

 

                           ನನ್ನ ತಲೆಯಲ್ಲಿ ಹೊಳೆಯುತ್ತಿದೆ ಒಂದು ವಿಷಯ. ಹೇಗಿದ್ದರೂ ಇವಳು ಐದಾರು ವರ್ಷಗಳಲ್ಲಿ ದಪ್ಪವಾಗಿ, ಆಕಾರ ದೊಡ್ಡದಾಗಿ ಬದಲಾಗುತ್ತದೆ. ಆಗ ಸೀರೆಗೆ ಹೊಂದುವ ಬೌಸ್ ಹೊಲಿಸಬಹುದು, ಆದರೆ ಸೀರೆ ಉಡುವುದಕ್ಕೆ ಸರಿಹೋಗುವುದಿಲ್ಲವೇ? ಅದಕ್ಕೆ ಎಕ್ಸಟ್ರಾ ಬಟ್ಟೆಯೂ ಹಾಗೆ ಬಿಟ್ಟರೆ ಮುಂದಿನ ದಿನಗಳಲ್ಲಿ ಅದೇ ಸೀರೆಯನ್ನು ಪದೇ ಪದೇ ಉಡಬಹುದಲ್ಲ ಎಂದು? ಇಲ್ಲದಿದ್ದರೆ ಡ್ರಮ್ ಗೆ ಸೀರೆ ಸುತ್ತಿಕೊಂಡ ಹಾಗೆ ಹೋಗಬೇಕಾಗುತ್ತದೆ ಎಂಬ ಮುಂದಾಲೋಚನೆಗೆ.....ಜೈ ಎನ್ನಬೇಕು ಅಲ್ಲವೇ !

Sunday, 15 July 2012

ಮಾನ ಕಳೆದುಕೊಳ್ಳಬೇಡಿ

                       ಸ್ನೇಹಿತನ ಮನೆಯಲ್ಲಿ ನಾವೆಲ್ಲ ಆರು ಗೆಳೆಯರು ಒಟ್ಟಾಗಿ ಸೇರಿ ಹರಟುತ್ತಿದ್ದೆವು. ಮೂರು ವರ್ಷ ವಯಸ್ಸಿನ ಗೆಳೆಯನ ಮಗನೊಬ್ಬನನ್ನು ಇನ್ನೊಬ್ಬ ಗೆಳೆಯ ಹುಡುಗನನ್ನು ಬಾಚಿಕೊಂಡು ತಬ್ಬಿ ಕೆನ್ನೆಗೆ ಮುತ್ತನ್ನಿಟ್ಟ. ಅದೇನೂ ವಿಶೇಷ ಅಲ್ಲ ಬಿಡಿ. ಇಬ್ಬರು ನಕ್ಕರು. ಹುಡುಗ ಅವರ ತಂದೆಯ ಬಳಿ ಹೋಗಿ ಕಿವಿಯಲ್ಲಿ ಏನನ್ನೋ ಗುಟ್ಟಾಗಿ ಹೇಳಿದ. ಅವರಪ್ಪ ಹೌದಾ ... ಎಂದು ಸುಮ್ಮನಾದರು. ಆದರೆ ಮುತ್ತನ್ನಿಟ್ಟ ವ್ಯಕ್ತಿಗೆ ಏನೋ ಕುತೂಹಲ. ಹುಡುಗೆ ಎನೋ ನನ್ನ ಬಗ್ಗೆ ಹೇಳಿದ್ದಾನೆ ಎಂದು. ತಿಳಿಯುವ ತವಕ. ಬಹಳ ಬಲವಂತವಾಗಿ ಪೀಡಿಸಿ ಹುಡುಗ ಏನು ಹೇಳಿದ ಎಂದು ಹೇಳುವಂತೆ ಒತ್ತಾಯ ಮಾಡಿದರು.

             ಅವರು ಕೊನೆಗೂ ಎಲ್ಲರೆದುರೂ ಬಾಯಿಬಿಟ್ಟರು. " ನಿಮ್ಮ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿತ್ತು..ಅಸಯ್ಯವಾಗಿತ್ತು ".

           ಈಗ ಎಲ್ಲರ ಮುಂದೆ ಮಾನ ಕಳೆದುಕೊಂಡ ಗೆಳೆಯನಿಗೆ ಹೇಗಾಗಿರಬೇಡ!


     ಎಚ್ಚರಿಕೆ- ಮಕ್ಕಳು ತಂದೆತಾಯಿ ಕಿವಿಯಲ್ಲಿ ಏನಾದರೂ ಗುಟ್ಟು ಹೇಳಿದಾಗ ಒತ್ತಾಯ ಮಾಡಿ ಏನು ಹೇಳಿದರು ಎಂದು ಕೇಳಬೇಡಿ. ಯಾರಿಗೆ ಗೊತ್ತು ? ಅವರು ಬಾಯಿಬಿಟ್ಟರೆ ನಿಮ್ಮ ಮಾನ ಹೋಗಬಹುದೇನೋ?..?

Wednesday, 11 July 2012

ನಿರುದ್ಯೋಗಿ ಮೊಟ್ಟೆಯೇ ?


              ಮೊನ್ನೆ ಬೆಂಗಳೂರಿನ ಒಂದು ಜನಪ್ರಿಯ ಬಡಾವಣೆಯಲ್ಲಿ ( ಹನುಮಂತನಗರ ಸಮೀಪ) ಗಾಡಿ ಓಡಿಸುತ್ತಿದ್ದಾಗ ರಸ್ತೆಯ ಒಂದು ಅಂಗಡಿಯ ಮುಂದಿನ ಬೋರ್ಡ್ ಗಮನ ಸೆಳೆಯಿತು. ಬೋರ್ಡ್ ನ್ನು ಬಹಳ ದೊಡ್ಡದಾಗಿಯೇ ಬರೆಸಿದ್ದರು. ಅದು ಹೀಗೆ ಬರೆದಿತ್ತು.

                            

                          " ನಿರುದ್ಯೋಗ ಯುವಕರ ಮೊಟ್ಟೆ ಮಾರಾಟ ಕೇಂದ್ರ "


ಈಗ ನೀವು ಹೇಳಿ ಮೊದಲ ಭಾಗ ನಿರುದ್ಯೋಗಿ ಯುವಕರು ಮತ್ತು ಎರಡನೆಯ ಭಾಗ ಮಾರಾಟ ಕೇಂದ್ರ.

ಸಮಸ್ಯೆಯೆಂದರೆ - ನಿರುದ್ಯೋಗಿ ಯುವಕರು ಹೇಗೆ ಮೊಟ್ಟೆ ಇಟ್ಟರು ? (ತೀರ ವಿಲಕ್ಷಣ ವಿಷಯ) ನಿರುದ್ಯೋಗಿ ಯುವಕರು ಮಾತ್ರ ಹೇಗೆ ಮೊಟ್ಟೆ ಇಡಲು ಸಾಧ್ಯ?

ಅವರು ಮೊಟ್ಟೆ ಮಾರಾಟ ಮಾಡಿದರೆ ಅದು ಹೇಗೆ ನಿರುದ್ಯೋಗಿಗಳಾಗುತ್ತಾರೆ?
ಮಾರಾಟ ಒಂದು ಉದ್ಯೋಗವಲ್ಲವೇ?

ಎಲ್ಲರೂ ಮೊಟ್ಟೆ ಇಡುತ್ತಾರೆ ಎಂದು ಕೇಳಿದ್ದೇವೆ. ಅದು ಯಾವಾಗಯೆಂದರೆ ಅವರ ಹೊಟ್ಟೆಯಲ್ಲಿ ಜಂತು ಹುಳುಗಳ ಭಾದೆ ಜಾಸ್ತಿಯಿದ್ದಾಗ.

ಆದರೆ ನನಗಂತೂ ಕಂಡಿದ್ದು ಆ ಅಂಗಡಿಯಲ್ಲಿ ಕೋಳಿ ಮೊಟ್ಟೆಗಳ ಸಾಲುಗಳು!

ಮುಖವೋ ತಲೆಯೋ !

                  ನಮ್ಮ ಎದುರು ಮನೆಯ ಮೂವತ್ತು ವರ್ಷ ವಯಸ್ಸಿನ ರಂಗನಿಗೆ ಇರೋದು ಅರ್ಧ ಬಾಂಡ್ಲೆ ತಲೆ. ನಮ್ಮ ಮೂರನೆ ಕ್ಲಾಸ್ ಓದೋ ಹುಡುಗನಿಗೆ ಒಂದು ಡೌಟ್ ಬಂದಿದೆ. ರಂಗ ಅಂಕಲ್ ಮುಖ ತೊಳೆಯೋದಿದ್ದರೆ ಎಲ್ಲಿವರೆಗೂ ತೊಳೀಬೇಕು? ಯಾಕೆಂದರೆ ಅವರ ಟೀಚರ್ ಹೇಳಿದ್ದಾರೆ ಮುಖ ತಲೆ ಅಂತ ಬೇರ್ಪಡಿಸುವುದು ತಲೆಯ ಕೂದಲು ಪ್ರಾರಂಭವ ಜಾಗದಿಂದ.

ಈಗ ಸಮಸ್ಯೆ ರಂಗನಿಗೆ ಮುಖವಿರುವುದು ತಲೆಯ ಅರ್ಧ ಭಾಗದವರೆಗೆ. ಹಾಗಿದ್ದರೆ ಪ್ರತಿ ಸಲ ರಂಗ ಮುಖ ತೊಳೆದಾಗಲು ಅರ್ಧ ತಲೆ ತೊಳೆದಂತಾಗುತ್ತದೆ !
 ನೀವೇಕೆ ನಿಮ್ಮ ತಲೆ ಮೇಲೆ ಕೈ ಇಟ್ಟುಕೊಂಡಿರಿ?