Wednesday, 26 September 2012

ಈ ವಾಸನೆ ಬೇಕೇ ಬೇಕು!......

                      ನಮ್ಮ ವಠಾರದ ಎದುರು ಮನೆಯಲ್ಲಿ ವಾಸವಾಗಿರೋ ಸೀನನಿಗೆ ಯಾರೋ ವೈದ್ಯರು ಗೋಮೂತ್ರ ಚಿಕಿತ್ಸೆ ನೀಡಿ ಅವನ ದೇಹದ ಅಂದರಿನಲ್ಲಿದ್ದ ಯಾವುದೋ ಕಾಯಿಲೆಯನ್ನು ಗುಣಪಡಿಸಿದ್ದಾರಂತೆ. ಗೋಮೂತ್ರವನ್ನು ಅವರು ಆರು ತಿಂಗಳು ಕಾಲ ಚಿಕಿತ್ಸೆಯಾಗಿ ತೆಗೆದುಕೊಂಡು ಗೋಮೂತ್ರದ ವಾಸನೆಗೆ ಚೆನ್ನಾಗಿ ಒಗ್ಗಿ ಹೋಗಿದ್ದಾರೆ. ಈಗ ಅವರ ಅಂದರಿನ ಕಾಯಿಲೆ ವಾಸಿಯಾಗಿ ಬೇರೆ ರೀತಿಯ ವಾಸನೆ ಕಾಯಿಲೆ ಶುರುವಾಗಿದೆ ಎಂದು ನಮ್ಮ ವಠಾರದವರೂ ಸೇರಿದಂತೆ ಸುತ್ತುಮುತ್ತಲಿನವರೆಲ್ಲಾ ಗುಸುಗುಸು...
   
                     ನಮ್ಮ ಕಾಲೋನಿಯನ್ನ್ಲಿ ಅಲ್ಲಲ್ಲಿ ಕೆಲವರು ಹಸುಗಳನ್ನು ಸಾಕಿದ್ದಾರೆ. ಬೆಳಿಗ್ಗೆ ಹಾಲು ಹಿಂಡಿಕೊಂದು ಹಸುಗಳನ್ನು ಬಿಟ್ಟರೆ ಸಾಯಂಕಾಲವೇ ಹಾಲು ಹಿಂಡಲು ಮನೆಗೆ ಕರೆದುಕೊಳ್ಳುವುದು ಈ ಕಾಲೊನಿಯಲ್ಲಿ ವಾಡಿಕೆ. ಅವು ಅಲ್ಲಲ್ಲಿ ನಿಂತು ಮೂತ್ರ ( ಗಂಜಲ) ವಿಸರ್ಜಿಸಿ ಕೆಸರು ಮಾಡೀರುತ್ತವೆ. ಈ ಗಂಜಲದ ವಾಸನೆ ಕೆಲವು ಬಾರಿ ಗಬ್ಬುನಾತ ಬರುತ್ತಿರುತ್ತದೆ.
                      ಚಿಕಿತ್ಸೆ ನಿಂತು ಎರಡು ತಿಂಗಳಿನ ನಂತರ ಈ ಆಸಾಮಿಗೆ ಒಂದು ಚಟ ಬಂದಿದೆಯಂತೆ. ಗೋಮೂತ್ರ ಸೇವಿಸುವಾಗ ಅದರ ವಾಸನೆಯ ಅಭ್ಯಾಸವಾಗಿ ಆ ಗಂಜಲದ ವಾಸನೆಯಿಲ್ಲದಿದ್ದರೆ ಸರಿಯಾಗಿ ಊಟ ಸೇರುವಿದಿಲ್ಲವಂತೆ ಮತ್ತು ನಿದ್ದೆ ಬರುವುದಿಲ್ಲವಂತೆ.
                     ಇವನು ಯಾರಿಗೂ ಹೇಳದೆ ಹಸುವಿನ ಗಂಜಲವಿರುವ ಸ್ಥಳದಲ್ಲಿ ಬಂದು ಒಂದೈದು ನಿಮಿಷ ನಿಂತು ಗಂಜಲದ ಗಬ್ಬುನಾತವನ್ನು ಆಘ್ರಾಣಿಸಿ ಮನೆಗೆ ಹೋಗಿ ಊಟ ಮಾಡಿ , ಮತ್ತೆ ವಾಕಿಂಗ್ ಅಂತ ನೆಪ ಹೇಳಿ ಮಲಗುವ ಮೊದಲು ಗಂಜಲವಿರುವ ಸ್ಥಳಕ್ಕೆ ಹೋಗಿ ವಾಸನೆ ಹಿಡಿದು ಮನೆಗೆ ಬಂದು ಮಲಗು ನಿದ್ರಿಸುತ್ತಾನಂತೆ. ಈ ವಠಾರದ ಜನರು ಇದನ್ನು ಗಮನಿಸಿಕೊಂಡೇ ಗುಲ್ಲಿಬ್ಬಿಸಿದ್ದಾರೆ...

ಕಣ್ಣಲ್ಲಿ ಕಣ್ಣಿಟ್ಟು.....


                ಮೊನ್ನೆ ನಮ್ಮ ಪಡ್ಡೆ ಹುಡುಗ ಯಾವುದೋ ಒಂದು ಪರ್ಸನಾಲಿಟಿ ಕೋರ್ಸ್ ಗೆ ಹೋಗಿ ಬಂದಿದ್ದ. ಅಲ್ಲಿ ಹೇಳಿಕೊಟ್ಟ ಒಂದು ವಿಷಯ ಎಂದರೆ ಯಾರನ್ನಾದರು ನೀನು ಮಾತನಾಡಿಸುವಾಗ ಅವರ ಕಣ್ಣುಗಳನ್ನು ನೇರವಾಗಿ ನೋಡು ಹಾಗು ನೋಡುತ್ತಲೇ ಮಾತನಾಡು. ಇದರಿಂದ ಬಹಳ ಅನುಕೂಲವಿದೆ. ಪಡ್ಡೆ ಹುಡುಗ ಸ್ವಾರಸ್ಯವಾದ ಈ ವಿಷಯವನ್ನು ಅವನ ಗೆಳೆಯರ ಗುಂಪಿನಲ್ಲಿ ಪ್ರಯೋಗಿಸಿ ವಿಶೇಷ ಅನುಭವ ಪಡೆದಿದ್ದಾನೆ. ಅದು ಆದದ್ದು ಹೀಗೆ...
                        ಹದಿನೈದು ಜನರ ಗುಂಪಿನಲ್ಲಿ ಹೀಗೆ ಯಾವುದೋ ವಿಷಯ ಕುರಿತು ಮಾತುಕತೆ , ಚರ್ಚೆ ನಡೆಯುತ್ತಿತ್ತು. ಗುಂಪಿನಲ್ಲಿ ಹಲವರಿಗೆ ಗಳಸ್ಯ ದೋಸ್ತಿಗಳು, ಇನ್ನು ಕೆಲವರಿಗೆ ಸ್ನೇಹಿತರು ಮಾತ್ರ, ಇನ್ನು ಕೆಲವರಿಗೆ ಅಷ್ಟಕ್ಕಷ್ಟೆ. ಕೊನೆಯ ವರ್ಗದ ಗುಂಪಿನ ಸ್ನೇಹಿತನ ಜೊತೆಗೆ ನಮ್ಮ ಪಡ್ಡೆ ಹುಡುಗ ಯಾವುದೋ ವಿಷಯಕ್ಕೆ ಬಿಸಿಯಾದ ಚರ್ಚೆ ಶುರುವಾಗಿದೆ. ಇದೇ ಸಮಯದಲ್ಲಿ ಈ ಪಡ್ಡೆ ಹುಡುಗ ಎದುರಾಳಿಯ ಕಣ್ಣುಗಳನ್ನೇ ನೋಡುತ್ತಾ ವಾದ ಮಾಡಿದ್ದಾನೆ. ಅವನು " ಏನು ಗುರಾಯಿಸಿ ಮಾತನಾಡುತಾ ಇದ್ದೀಯಾ..ಇನ್ನೊಂದು ಸಲ ಹಾಗೆ ಕಣ್ಣಲ್ಲಿ ಗುರಾಯಿಸಿದರೆ ನೋಡು ನಿನ್ನ ದವಡೆ ಹಲ್ಲುಗಳು ಕಡಿಮೆಯಾಗುತ್ತೆ" ಎಂದು ಹೆದರಿಸಿದ್ದಾನೆ.
                       ಈಗೆ ನಮ್ಮ ಪಡ್ಡೆ ಹುಡುಗನಿಗೆ ಅಳುಕು ಶುರು ಆಗಿಬಿಟ್ಟಿದೆ. ಅಲ್ಲಿ ಕೋರ್ಸ್ ನಲ್ಲಿ ಹೇಳಿದ ಇನ್ನೂ ಹಲವು ವಿಷಯಗಳನ್ನು ಪ್ರಯೋಗಿಸುವುದೋ ಅಥವಾ ಪ್ರಯೋಗಿಸಿ ಮುಖದ ಒಂದೊಂದು ಭಾಗವನ್ನು ವಿಕಾರಗೊಳಿಸುವುದೋ ಎಂದು?
                         ನೀವಾದರೂ ಕಣ್ಣಲ್ಲಿ ಕಣ್ಣಿಟ್ಟು.. ಯಾವಾಗ , ಯಾರ ಹತ್ತಿರ , ಎಲ್ಲಿ, ಎಷ್ಟು ಸಮಯ ನೋಡಬಹುದು ಅಂತ ಸಮಾಧಾನದ ಉತ್ತರ ಹೇಳ್ತೀರ........

Tuesday, 25 September 2012

ತೂಕ ಕಡಿಮೆ ಆಗಲಿಲ್ಲ..ಗುರುವೇ!


ನಮ್ಮ ರಮೇಶನಿಗೆ ಇತ್ತೀಚೆಗೆ ಏನೋ ಗೀಳು ಹತ್ತಿಕೊಂಡಿದೆ. ಏಕೆಂದರೆ ಅವನ ಮನೆಯವರು ಮತ್ತು ಸ್ನೇಹಿತರು " ನೀನು ತೂಕ ಕಡಿಮೆ ಮಾಡಿಕೊಂಡರೆ ಸ್ಮಾರ್ಟ್ ಕಾಣುತ್ತೀಯ , ಒಂದು ಹೆಣ್ಣು ಸಿಗುವವರೆಗಾದರೂ ತೂಕ ಕಡಿಮೆ ಮಾಡಿಕೊಳ್ಳೋ .." ಎಂದು ೮೮ ಕಿಲೋ ತೂಕವಿರುವ ರಮೇಶನಿಗೆ ಕಿವಿಯಲ್ಲಿ ಸಣ್ಣ ಹುಳವನ್ನು ಬಿಟ್ಟಿದ್ದಾರೆ. ಅದಕ್ಕೋಸ್ಕರ ಕೆಲಸ ಪ್ರಾರಂಭವಾಗಿದೆ.

              ಈಗ 3 ತಿಂಗಳಿನಿಂದ ಬೆಳಿಗ್ಗೆ 6 ಗಂಟೆಯಿಂದ 7 ಗಂಟೆಯವರೆಗೆ ಒಬ್ಬನೇ ವಾಕಿಂಗ್ ಪ್ರಾರಂಭಿಸಿದ್ದಾನೆ. ಪ್ರತಿ ದಿನ ಕಷ್ಟಪಟ್ಟು ಅಲಾರಂ ಶಬ್ಧಕ್ಕೆ ಎದ್ದೇಳಿ..ತೂಕವಿಳಿಸುವ ಆಸಕ್ತಿಯಿಂದ ಅಭ್ಯಾಸ ಮಾಡಿದ್ದಾನೆ. ಈ ಒಂದು ಗಂಟೆ ಅವಧಿಯಲ್ಲಿ ಅವನು ಹೋಗುವ ದೂರ ಕೇವಲ 2 ರಿಂದ 3 ಕಿಮಿ, ಅಷ್ಟಕ್ಕೆ ಸುಸ್ತಾಗುತ್ತಾನಂತೆ. ಅದಕ್ಕೆ ಬೆಳಿಗ್ಗೆಯೇ ಬಿಸಿ ಬಿಸಿ ಇಡ್ಲಿ , ವಡೆ ತಿನ್ನುತ್ತಾನಂತೆ. ಅದನ್ನು ತಿಂದು ಕಾಫಿ ಕುಡಿದು ಮನೆಗೆ ಬರುತ್ತಿದ್ದಾನೆ. ಈ ವಿಷಯ ಮನೆಯಲ್ಲಿ ಯಾರಿಗೂ ಹೇಳಿರಲಿಲ್ಲ.

            ಈಗೆ ಅವನಿಗೆ ವಾಕಿಂಗ್ ಗಿಂತ ಬೆಳಿಗ್ಗೆಯ ಇಡ್ಲಿ ವಡೆಯ ರುಚಿಗೆ ಅಲ್ಲಿಗೆ ಹೋಗುವಂತಾಗಿದೆಯಂತೆ. ಮೊನ್ನೆ ಯಾವಾಗಲೋ ತೂಕ ನೋಡಿಕೊಂಡವನು ಗಾಬರಿಯಾಗಿದ್ದಾನೆ. ೯೫ ಕಿಲೊಗೆ ತೂಕದಲ್ಲಿ ಮುಳ್ಳು ನಿಂತುಬಿಟ್ಟಿದೆ. ವಾಕಿಂಗ್ ಮಾಡಿದ್ದರಿಂದನೇ ತೂಕ ಜಾಸ್ತಿಯಾಯಿತು ಇಂದು ತರ್ಕ ಮಾಡುತ್ತಿದ್ದಾನೆ. ಇನ್ನು ಮುಂದೆ ವಾಕಿಂಗ್ ಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದಾನೆ.

             ಗುರುವೇ !.. ಇವನಿಗೆ ಜಿಮ್ ವಿಳಾಸ ತಿಳಿಸಿ ಹಾಗು ಅಲ್ಲಿರುವ ಹೋಟೆಲ್ , ಜ್ಯೂಸ್ ,ಇತರೆ ಪಾನಿಯ ದೊರಕುವ ವಿವರವನ್ನು ಕೊಡಿ, ಎರಡೂ ಕಡೆ ಚೆನ್ನಾಗಿ ವ್ಯಾಪಾರ ಪ್ರತಿದಿನ ಖಡ್ಡಾಯವಾಗಿ ಆಗುತ್ತದೆ.