Thursday 3 January 2013

ಮೂಗು ತುದಿಯಲ್ಲೇ ಕೋಪ .. . ...

                  ಇವನಿಗೆ ಯಾವಾಗಲೂ ಮೂಗಿನ ತುದಿಯಲ್ಲೇ ಕೋಪ " ಎಂದು ನನ್ನ ಅಕ್ಕ ಆಗಾಗ ನನ್ನನ್ನು ಚಿಕ್ಕವನಿದ್ದಾಗ ರೇಗಿಸುತ್ತಿದ್ದಳು. ಯಾವಾಗ ಎಂದರೆ ಅದೂ ಕೋಪ ಇಳಿದ ಮೇಲೆ. ಇದನ್ನು ಓದುತ್ತಿರುವವರಿಗೂ ಅನುಭವ ಆಗಿರಬೇಕೆ ಅಥವಾ ಅನುಭವಿಸಿರಬೇಕು ಎಂದು ನನ್ನ ಅನಿಸಿಕೆ.ಆದರೆ ನನ್ನ ಸಂದೇಹ ಎಂದರೆ ಮೂಗು ತುದಿಯಲ್ಲಿ ಕೋಪವಿರುತ್ತೋ ಅಥವಾ ಮೂಗಿನ ಬುಡದಲ್ಲಿ ಕೋಪವಿರುತ್ತೋ ! ಎನ್ನುವುದು. ಮೂಗಿನ ತುದಿಯಲ್ಲಿ ಕೋಪವಿದ್ದರೆ ಮುಂಗೋಪಿ ಎಂದು ಕರೆಯಬಹುದು ಎಂದುಕೊಳ್ಳೋಣ ಅದೇ ಮೂಗಿನ ಬುಡದಲ್ಲಿ ಕೋಪವಿದ್ದರೆ ಹಿಂಗೋಪಿ ಅಥವಾ ಮಧ್ಯಗೋಪಿ ಎಂದು ಎಲ್ಲೂ ಕರೆದಿರುವುದನ್ನು ನಾನು ಓದಿಲ್ಲ ಅಥವಾ ಕೇಳಿಲ್ಲ.

            ಎರಡನೆಯದು ಮೂಗಿನ ತುದಿಯಲ್ಲೇ ಕೋಪ ಎಂದು ಹೇಳುವವರಿಗೆ ನಿಜವಾಗಿಯೂ ಕೋಪ ಕಾಣಿಸುತ್ತದೆಯೇ ! ಏಕೆಂದರೆ ಯಾರಾದರೂ ಆಗಲಿ ಅಣ್ಣ, ಅಕ್ಕ, ತಂಗಿ, ಗಂಡ, ಸ್ನೇಹಿತ ಯಾರ‍ೇ ಆದರೂ ಬೇರೆಯವರ ಕಡೆ ಬೆಟ್ಟು ಮಾಡಿ ಇವನಿಗೆ ಮೂಗಿನ ತುದಿಯಲ್ಲೇ ಕೋಪ ( ಮುಂಗೋಪಿ) ಎಂದು ಹೇಳುತ್ತಾರೆ. ಆದರೆ ಆ ವ್ಯಕ್ತಿಗೆ ನಿಜವಾಗಿಯೂ ಕೋಪ ಮೂಗಿನ ತುದಿಯಲ್ಲಿ ಇರುವುದು ಅನುಭವವಾಗುತ್ತದೆಯೇ ಎನ್ನುವುದು. ಏಕೆಂದರೆ ಯಾರೂ ನನಗೆ ಮೂಗಿನ ತುದಿಯಲ್ಲೇ ಕೋಪವಿದೆ ಎಂದು ಹೇಳಿಕೊಳ್ಳುವುದಿಲ್ಲ.
       
         ಇನ್ನೊಂದು ಸಂದೇಹವಿದೆ. ಸ್ವಲ್ಪ ತಡೆಯಿರಿ. ಹಲವರ ಮುಖಗಳಲ್ಲಿ ಮೂಗಿನ ಪ್ರಾಮುಖ್ಯ ಜಾಸ್ತಿ. ಕಣ್ಣಿನ ನಂತರ ಮೂಗು ಮುಖಕ್ಕೆ ಲಕ್ಷಣ ಕೊಡುವುದು ಅಲ್ಲವೇ? ಆದರೆ ಮೂಗಿನ ತುದಿ ಮಾತ್ರ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ ಎನ್ನುವುದು ಗೊತ್ತಿರುವ ವಿಷಯವೇ! ಕೆಲವರ ಮೂಗಿನ ತುದಿ ಚೂಪಾಗಿದ್ದು, ಕೆಲವರಲ್ಲಿ ತುದಿ ದಪ್ಪಗಿದ್ದರೆ, ಇನ್ನೂ ಕೆಲವರಲ್ಲಿ ಮೂಗಿನ ಹೊಳ್ಳೆಗಳೇ ಪಾಧಾನ್ಯವಾಗಿ ಮೂಗಿನ ತುದಿಯು ಮೇಲ್ಮಖವಾಗಿ ಆಕಾಶ ನೋಡುತ್ತಿದ್ದರೆ, ಸ್ವಲ್ಪ ಜನರಲ್ಲಿ ಮೂಗಿನ ತುದಿ ಮೇಲ್ತುಟಿಯನ್ನು ನೋಡುತ್ತಿದ್ದರೆ, ಇತರರಿಗೆ ಮೂಗು ತುದಿ ಗಿಳಿಮೂಗು ಆಗಿರುತ್ತದೆ.

              ಮೂಗಿನ ತುದಿಯಲ್ಲೇ ಕೋಪ ಎಂದು ಹೇಳುವವರನ್ನು ನಾನು ಕೇಳಬೇಕಾಗಿದೆ " ಯಾವ ರೀತಿಯ ಮೂಗಿನ ತುದಿ ಇದ್ದರೆ ನೀವು ಅನುಭವಿಸಿದ ಹಾಗೆ ಅಥವಾ ಕಂಡ ಹಾಗೆ ಕೋಪ ತುದಿಯಲ್ಲಿದ್ದು ಬೇಗ ಸಿಟ್ಟಾಗುತ್ತಾರೆ. ತಬ್ಬಿಬ್ಬಾಗಬೇಡಿ. ಇಂದಿನಿಂದ ಗಂಭೀರವಾಗಿ ಮುಂಗೋಪಿ ಎಂದು ಕರೆಯುವ ಆಪ್ತೇಷ್ಟರು ಅಥವಾ ನಿಮ್ಮ ದ್ವೇಷಿಗಳನ್ನು ಗಮನಿಸಿ. ಕೋಪ ಯಾವ ಮೂಗಿನ ತುದಿಯಿದ್ದರೆ ಕೋಪ ಬೇಗ ಬರತ್ತದೆ ಎಂದು ! ತಿಳಿಯಲ್ಲಿಲ್ಲವೇ.  

              ಈಗ ಆ ವ್ಯಕ್ತಿಯನ್ನು ಛೇಡಿಸಿ, ರೇಗಿಸಿ, ಪೀಡಿಸಿ ತಕ್ಷಣ ಗೊತ್ತಾಗುತ್ತದೆ ..ಕೋಪ ಬಂದಿದೆಯೇ ....

ನಾಯಿದು ಗೊತ್ತು ಆದರೆ ತನ್ನದು ಗೊತ್ತಿಲ್ಲ...

                ಬೆಳಿಗ್ಗೆ ಅಥವಾ ರಾತ್ರಿಯ ವೇಳೆ ನಾಯಿಗಳ ಯಜಮಾನರು ತಮ್ಮ ಸಾಕು ನಾಯಿಗಳನ್ನು ಅವುಗಳ ಬಹಿರ್ದೆಶೆಗೆ ( ಉಚ್ಚೆ, ಕಕ್ಕಸ್ಸು ಮಾಡಿಸಲು) ಕರೆದುಕೊಂಡು ಹೋಗುವುದನ್ನು ಸಿಟಿಯಲ್ಲಿ ವಾಸಿಸುವವರಿಗೆ ಗೊತ್ತೇಯಿದೆ! . ನಾಯಿ ಕಕ್ಕಸ್ಸು ಮಾಡುವ ಜಾಗ ಹುಡುಕುತ್ತಾ ಓಡಿದರೆ , ಅದನ್ನು ಹಿಡಿದಿರುವ ಯಜಮಾನ/ ಯಜಮಾನಿಗೆ ಅದು ನಡುಗೆಯಂತೆ. ನಾಯಿ ಕಕ್ಕಸ್ಸು ಮಾಡುವುದನ್ನು ನೋಡುತ್ತಾ ಕಾಯುವ ಮಂದಿಗೆ , ಅದೇ ಸ್ವಲ್ಪ ದೂರದಲ್ಲಿ ಯಾರಾದರೂ ಗಿಡದ ಅಥವಾ ಮರೆಯಲ್ಲಿ ಮೂತ್ರ ವಿಸರ್ಜಿಸುತ್ತಿದ್ದರೆ ಇದು ಅಸಹ್ಯವಂತೆ.
               
           ಸ್ವಚ್ಛತೆ ಬಗ್ಗೆ , ಕಸದ ಬಗ್ಗೆ , ಮೂತ್ರ ವಿಸರ್ಜನೆಯ ಬಗ್ಗೆ ಮಾತನಾಡುವ ನಾಗರಿಕರಾದ ನಮ್ಮಲ್ಲಿ ಹಲವರು ತಮ್ಮ ನಾಯಿಗಳನ್ನು ಗುರುತು ಪರಿಚಯವಿಲ್ಲದವರ ಮನೆಯ ಮುಂದೆ ಎಲ್ಲೆಂದರಲ್ಲಿ ಮೂತ್ರ ಮತ್ತು ಮಲ ವಿಸರ್ಜನೆ ಮಾಡಿಸುವುದಕ್ಕೆ ಅಭ್ಯಂತರವಿಲ್ಲ! ಎಂಥಾ ವಿಪರ್ಯಾಸ ಅಲ್ಲವೇ?

            ನಮ್ಮ ಸ್ನೇಹಿತರೊಬ್ಬರಿಗೆ ಮೂಲಸ್ಥಾನದಲ್ಲಿ ( ಗುದದ್ವಾರ) ನೋವಾಗುತ್ತಿದೆ , ಉಧಾಸೀನ ಮಾಡಬಾರದೆಂದು ವೈದ್ಯರನ್ನು ಸಂದರ್ಶಿಸಿದರೆ " ಮಲ ಹೋಗುವಾಗ ರಕ್ತವೇನಾದರೂ ಕಂಡಿತೆ?" ಎಂದು ಕೇಳಿದರಂತೆ. " ನಾನು ನೋಡಿಲ್ಲ ನಾಳೆ ಸರಿಯಾಗೆ ನೋಡಿ ಹೇಳುತ್ತೇನೆ" ಎಂದು ಹೇಳಿಬಂದರಂತೆ. ಅವರು ಈ ವಿಷಯ ಹೇಳಿದಾಗ ನನಗೆ ನಗುವೇ ಬಂದಿತು. ಅವನು ನಾಯನ್ನು ಕರೆದುಕೊಂಡು ಅದು ಕಕ್ಕಸ್ಸು ಮಾಡುವುದನ್ನು ಸಾವಧಾನವಾಗಿ ಗಮನಿಸುವ ಇವನು , ಅವನೇ ಹೋಗುವ ಮಲದ ಜೊತೆಗೆ ರಕ್ತ ಬಂದಿತ್ತೇ ಎಂಬುದು ಗಮನಿಸಿಲ್ಲ. ಅದಕ್ಕೇ ಒಂದು ದಿನ ಬೇಕು ಎಂದು ವಾಪಸ್ಸು ಬಂದನಲ್ಲ , ಏನು ಹೇಳಬೇಕು? ಪಾಯಿಖಾನೆಗೆ ಹೋದ ನಂತರ ತಕ್ಷಣ ನೀರಿನ ಸಂಗ್ರಹಣೆಯ ತೊಟ್ಟಿಯನ್ನು ಒತ್ತಿ ಪ್ಲಷ್ ಮಾಡುವುದರಿಂದ , ಅವನಿಗೆ ಯಾವಾಗಲಿಂದ ಈ ಸಮಸ್ಯೆಯಿತ್ತು ಎನ್ನುವುದೇ ತಿಳಿಯಲಿಲ್ಲ?

                ನಿಮ್ಮಲ್ಲೂ ಇಂಥ ಜನರಿದ್ದಾರೆ ಅಲ್ಲವೇ?