Saturday 27 April 2013

ಕನ್ನಡಿಯಲ್ಲಿ ನಿಮ್ಮ ಮುಖ ನೋಡಿ.....

         ನಾನು ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಗಮನಿಸಿದ ಹಾಗು ಹಲವು ಸಲ ನೋಡಿ ಮನಸ್ಸಿನೊಳಗೇ ನಗುತ್ತಿದ್ದುದು ಇದೆ. ಅದರಲ್ಲೂ ಹದಗು ಪ್ರಯಾಣದ ರೈಲುಗಳಾದರೆ ಅದರಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಇರುವ ಕಾರಣ ರೈಲಿನಲ್ಲಿ ನಿಮಗೆ ಬಿಟ್ಟಿ ಮನರಂಜನೆ ಸಿಗುವುದು ಎಓದು ನನ್ನೆ ಅನಿಸಿಕೆ.

           ರೈಲಿನ ಕೋಚಿನ ಅಥವಾ ಬೋಗಿ ಎರಡೂ ತುದಿಯಲ್ಲಿ ಟಾಯ್ಲೆಟ್ ಮೊದಲು ಕನ್ನಡಿ ಮತ್ತು ಕೈ ತೊಳೆಯಲು ( ಏನು ಬೇಕಾದರೂ ತೊಳೆಯಬಹುದು) ನೀರಿನ ವ್ಯವಸ್ಥೆ ಮತ್ತು ಸಿಂಕು ಇರುತ್ತದೆ. ಈ ಕನ್ನಡಿಯೇ ನನ್ನೆ ಮನರಂಜನೆಗೆ ಮುಖ್ಯ ವಸ್ತು. ರೈಲು ಹತ್ತುವಾಗ ಹೆಚ್ಚು ಜನ ಕನ್ನಡಿಯ ಬಗ್ಗೆ ಗಮನ ಹರಿಸಲು ಹೋಗುವುದಿಲ್ಲ. ಆದರೆ ಜನರು ಇಳಿಯುವಾಗ ಶೇಕಡ ತೊಂಬತ್ತರಷ್ಟು ಮಂದಿ ಕನ್ನಡಿಯಲ್ಲಿ ತಮ್ಮ ಮುಖ ದರ್ಶನ ಮಾಡಿಯೇ ಕೆಳಗಿಳಿಯುತ್ತಾರೆ, ಅದೂ ಕೆಲವೇ ಕ್ಷಣಗಳು ಮಾತ್ರ. ಆದರೆ ರೈಲು ಚಲಿಸಿತ್ತಿರುವಾಗೆ ಪಡ್ಡೆ ಹುಡುಗರು ಮತ್ತು ಯುವ ಪ್ರಾಯದವರು ತಮ್ಮನ್ನು ಕನ್ನಡಿಯಲ್ಲಿ ನೋಡಿಕೊಳ್ಳುವುದನ್ನು ಗಮನಿಸುತ್ತಿದ್ದರೆ ನೀವು ತುಂಬೆ ಮನಸ್ಸಿನಿಂದ ಮನರಂಜಿಸಿಕೊಳ್ಳಬಹುದು. ನಾನು ಗಮನಿಸಿದ ಹಾಗೆ ಹೆಚ್ಚು ಯುವಕರು ಒಂದೇ ರೀತಿ ಕನ್ನಡಿಯ ಮುಂದೆ ನಡೆದುಕೊಳ್ಳುವುದು. ಮೊದಲಿಗೆ ತಮ್ಮ ತಲೆಕೂದಲನ್ನು ಸರಿ ಮಾಡಿಕೊಳ್ಳುತ್ತಾರೆ. ಕೆಲವರು ಮುಂದಿನ ಕೂದಲನ್ನು ಹಿಂದಕ್ಕೆ ತಳ್ಳಿಕೊಂಡರೆ , ಕೆಲವರು ಕೂದಲನ್ನು ಒತ್ತಿ ಒತ್ತಿ ಅಥವಾ ಕೈ ಬೆರಳಿನಿಂದ ತೀಡಿಕೊಂಡು ಒಂದು ರೂಪಕ್ಕೆ ತರಿಸಿಕೊಳ್ಳುತ್ತಾರೆ.

          ಮುಂದಿನ ಹಂತವೇ ಸ್ವಾರಸ್ಯಕರ . ಮೊದಲಿಗೆ ಮುಖ ಸರಿಯಾಗಿರಿಸಿಕೊಂಡು ನೋಡಿಕೊಳ್ಲುತ್ತಾರೆ ನಂತರ ಕಿರುನಗೆಯನ್ನು ತುಟಿಯಲ್ಲಿ ಮಾಡಿಕೊಳ್ಳುತ್ತಾರೆ. ಹಾಗೆ ಮುಂದುವರಿಸಿಕೊಂಡು ಮಖವನ್ನು ಓರೆಯಾಗಿ ಮಾಡಿಕೊಂಡು ತಾನು ನಕ್ಕರೆ ಹೇಗೆ ಕಾಣುತ್ತಿರುವೆನೆಂದು ನೋಡಿಕೊಳ್ಳುವುದು. ಇದಾದ ತಕ್ಷಣ ಕೆಲವರಲ್ಲಿ ಅನುಮಾನ ಮೂಡಿದ ಹಾಗೆ ಕನ್ನಡಿಯ ಮುಂದಕ್ಕೆ ವಾಲಿಕೊಂಡು ಹಲ್ಲುಗಳನ್ನು ಪರೀಕ್ಷಿಸಿಕೊಳ್ಳುವುದು. ಎರಡೂ ದಂತಪಂಕ್ತಿಯನ್ನು ನೋಡಿಕೊಂಡು ತುಟಿಯನ್ನು ವಿಚಿತ್ರ ರೀತಿಯಲ್ಲಿ ಮಾಡುವುದನ್ನು ನೀವು ದೂರದಿಂದಲೇ ಗಮನಿಸಿದರೆ ನೀವೂ ಕೂಡ ಮನಸ್ಸಿನಲ್ಲಿ ನಗದೇ ಇರಲಾರಿರಿ. ಮುಂದಿನ ಹಂತವೇ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳುವುದು ಅರ್ಥಾತ್ ನೋಡಿಕೊಳ್ಳುವುದು. ಮೊದಲಿಗೆ ಕಣ್ಣುಗಳನ್ನು ಅಗಲ ಮಾಡಿ , ನಂತರ ಕಿರಿದು ಮಾಡಿ, ವಾರೆಗಣ್ಣು ಮಾಡಿ ನೋಡಿದ ಮೇಲೆಯೇ ಎನೋ ಒಂದು ರೀತಿಯ ತೃಪ್ತಿ ಆ ವ್ಯಕ್ತಿಗೆ.

             ಇಲ್ಲಿ ಗಮನಿಸಬೇಕಾದದ್ದು ಒಂದು ವಿಷಯವೆಂದರೆ ಕನ್ನಡಿಯ ಮುಂದೆ ನಿಂತಾಗ ಅವನು ಯಾವುದೇ ಅಡಚಣೆಯಿಲ್ಲದಿದ್ದಾಗ ಮಾತ್ರ ಈ ಶೃಂಗಾರ. ಹಲವರು ತನ್ನ ಸುತ್ತಮುತ್ತ ಇದ್ದರೂ ಕ್ಯಾರೇ ಎನ್ನುವುದಿಲ್ಲ. ತನ್ನನ್ನು ಯಾರೂ ಗಮನಿಸುತ್ತಿಲ್ಲ ಎಂಬುದು. ಆದರೆ ವಾಸ್ತವವಾಗಿ ನನ್ನಂತಹ ಹಲವೆ ಜನರು ಪೇಪರ್ ಓದಿದ ಮೇಲೆ, ಪತ್ರಿಕೆಗಳನ್ನು ತಿರುವಿಹಾಕಿದ ಮೇಲೆ, ಸುಮ್ಮನೆ ಟೈಂ ಪಾಸ್ ಗೆ ಅಲ್ಲಿ ಇಲ್ಲಿ ನೋಡುತ್ತಿರುವಾಗ ದೂರದಿಂದ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಬಹುದು. ನಾವು ಆ ವ್ಯಕ್ತಿಯ ಹಿಂದೆ ಇರುವ ಕಾರಣ ಅವನ ಮುಖದ ಚಲನವಲನಗಳನ್ನು ದರ್ಶನ ನಮಗೆ ಲಭ್ಯವಾಗಿ ಪುಕ್ಕಟೆ ಮನರಂಜನೆ ಕೊಡುತ್ತದೆ. ಹೆಂಗಸರು ಈ ರೀತಿ ನಡೆದುಕೊಳ್ಳುವುದು ಅಪರೂಪ.

              ಮುಂದಿನ ಸಲ ಕನ್ನಡಿಯಲ್ಲಿ ನಮ್ಮ ಮುಖ ದರ್ಶನದ ಜೊತೆಗೆ ಕನ್ನಡಿಯ ಕಡೆಗೇ ಇನ್ನೂ ಯಾರದಾದರು ಮುಖವಿದೆಯೆ ಎಂದು ಕನ್ನಡಿಯಲ್ಲೇ ಗಮನಿಸಿ. ಇಲ್ಲದಿದ್ದರೆ ನೀವು ಪುಕ್ಕಟೆ ಮನರಂಜನೆಗೆ ಒಂದು ವಸ್ತುವಾಗುವಿರಿ.