Wednesday 4 November 2015

ತಲೆ ಮೇಲೆ ಕೈ...


                   ಈ ಶೀರ್ಷಿಕೆ ನೋಡಿ ಯಾವುದೋ ಪ್ರಬಂಧ ಬರೆಯುತ್ತಿದ್ದೇನೆ ಅಂದುಕೊಳ್ಳಬೇಡಿ ಅಥವಾ ನೀವೇ ನಿಮ್ಮ ತಲೆ ಮೇಲೆ ಕೈಯಿಟ್ಟುಕೊಳ್ಳಬೇಡಿ.
                        ಕಳೆದ ವರ್ಷ ನಮ್ಮ ಸ್ನೇಹಿತನೊಬ್ಬ ವ್ಯಾಪಾರಕ್ಕೋಸ್ಕರ ಯಾರಿಗೋ ಬಡ್ಡಿಗೆ ಹಣ ಕೊಟ್ಟನಂತೆ, ಅದೂ ಮೀಟರ್ ಬಡ್ಡಿ ಲೆಕ್ಕವಂತೆ. ಅವನ ಸಾಲಗಾರನೊಬ್ಬ ಅಲ್ಪ ಸ್ವಲ್ಪ ಬಡ್ಡಿ ಕೊಟ್ಟು ಅಸಲು ಆಮೇಲೆ ಕೊಡಬೇಕೆನ್ನುವವನು ಬೆಳ್ಳಂಬೆಳಿಗ್ಗೆ  ಮಾರ್ಕೆಟ್  ಹತ್ತಿರ ಯಾವುದೋ ಲಾರಿಗೆ ಸಿಕ್ಕಿ ಅಲ್ಲೇ ಸತ್ತನಂತೆ. ವಿಷಯ ತಿಳಿದ ಕೂಡಲೇ ನನ್ನ ಸ್ನೇಹಿತ ತಲೆ ಮೇಲೆ ಕೈಯಿಟ್ಟುಕೊಂಡು ಗೋಳೋ ಎಂದು ಅವನ ಹೆಂಡತಿ ಮುಂದೆ ಅತ್ತು ಬಿಟ್ಟನಂತೆ. ಅವಳು ಬಹುಷಃ ಅವರ್ಯಾರೋ ಬಾಲ್ಯ ಸ್ನೇಹಿತರೋ ಇಲ್ಲ ತೀರ ಹತ್ತಿರದ ಸ್ನೇಹಿತರು ಇರಬಹುದು ಎಂದುಕೊಂಡು) ಎಷ್ಟೇ ಸಮಾಧಾನ ಮಾಡಿದರೂ ಸುಧಾರಿಸಲ್ಲಿಲ್ಲವಂತೆ.  ಅವಳಿಗೆ ವಿಷಯ ತಿಳಿಸಿ " ಅವನು ಸತ್ತಿದ್ದಕ್ಕೆ ಅಳುತ್ತಾ ಇಲ್ಲವೇ, ನಾನು ಕೊಟ್ಟ ಹಣ ವಾಪಸ್ಸು ಬರಲ್ಲ. ಹಣ ಕೊಟ್ಟಿದ್ದಕ್ಕೆ ಯಾವುದೇ ಸಾಕ್ಷಿ / ದಾಖಲೆ ತೆಗೆದುಕೊಳ್ಳಲಿಲ್ಲ. ಇನ್ನು ನನ್ನ ಸಂಸಾರವನ್ನು ಹೇಗೆ ಸಾಗಿಸಲಿ ಎಂದು ಗೋಳೋ ಅಂತ ಅತ್ತು ಬಿಟ್ಟನಂತೆ. ಅವನ ಹೆಂಡತಿ ಅವಳ ತಲೆ ಮೇಲೆ ಕೈಯಿಟ್ಟುಕೊಂಡಳಂತೆ. ಇದೇನ್ಯ್ ಹೊಸ ವಿಚಾರ ಅಲ್ಲವೇ ಅಲ್ಲ ಬಿಡಿ.
                         ಆದರೆ ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಬೇಕು? ನೀವು ಯಾವಾಗಲಾದರೂ ನಮ್ಮ ತಲೆ ಮೇಲೆ ಕೈಯಿಟ್ಟುಕೊಂಡಿದ್ದೀರಾ!!  ತಕ್ಷಣ ನೆನಪಿಗೆ ಬರಲಿಲವೇ ? ಹಾಗಾದರೆ ನಿಮ್ಮ ತಲೆ ಮೇಲೆ ಕೈಯಿಟ್ಟುಕೊಂಡು  ಯೋಚಿಸಿ... ನೆನಪಿಗೆ ಬರಬಹುದು.

Thursday 29 January 2015

ಸಾಯೋಕಾಲದಲ್ಲಿ ಆಗುವವನೇ ಬಾಂಧವ ಅಲ್ಲ ನರ್ಸ್...


                            ಆಶ್ಚರ್ಯವಾಗಬಹುದು  ನಿಮಗೆ ...ಏನು  ಹೀಗೆ ಬರೆದಿದ್ದಾರಲ್ಲ ಎಂದು ಅನಿಸುತ್ತಿರಬಹುದು, ಹಳೇ ಗಾದೆಯನ್ನು ಹೆಚ್ಚಾಗಿ ಬಳಸುತ್ತಿದ್ದುದು  ಮಧ್ಯ ಮತ್ತು ಮುಪ್ಪಿನ ವಯಸ್ಸಿನವರು. ಅವರಿಗೆ ಅದೇ ಚಿಂತೆ. ಸಾಯುವಾಗ ಜೊತೆಗೆ ಯಾರು ಇರುತ್ತಾರೋ , ಹೆಂಡತಿಯೋ ! ಮಕ್ಕಳೋ! ಮೊಮ್ಮಕ್ಕಳೋ! ಮರಿ ಮಕ್ಕಳೋ! ನೆರೆ ಹೊರೆಯವರೋ!  ಇತ್ಯಾದಿ..  ಇದರ ನಂತರ ಹೆಚ್ಚು ಜನರು ಯೋಚಿಸುವುದು ಕಡಿಮೆ. ಇದೆಲ್ಲಾ  ಹಳ್ಳಿಯ ಅಥವಾ ಗ್ರಾಮೀಣ ಜನರು  ಯೋಚಿಸುವ ರೀತಿ ಎಂದು ತಿಳಿಯಬೇಡಿ. ಅಥವಾ ಹಳೆಯ ಮಾತು ಎಂದು ಭಾವಿಸಬೇಡಿ.
                     ಈಗ ಪರಿಸ್ಥಿತಿ ಹಾಗೂ ಸಮಾಜದಲ್ಲಿ ಬದಲಾವಣೆ  ಅನಿವಾರ್ಯವಾಗಿದೆ. ಮನೆಯವರ ಒತ್ತಡ ಇಲ್ಲವೇ ವಿಮಾ ಪ್ರಭಾವದ ಕಾರಣದಿಂದ ಸಾಯೋ ಸಮಯ ಅಥವಾ ಕಾಯಿಲೆ ತೀವ್ರವಾದಾಗ ಆಸ್ಪತ್ರೆ ಸೇರುವುದು ಸಾಮಾನ್ಯವಾಗಿದೆ. ಇಲ್ಲವೇ ಮನೆಯಲ್ಲಿಯೇ ನರ್ಸ್ ರವರ ಸೇವೆ ಪಡೆಯುವ ಕಾಲ ಬಂದಿದೆ. ಆಸ್ಪತ್ರೆಯಲ್ಲಿಯೂ ಕೂಡ  ಸಾಯುವವರನ್ನು ಸಂಬಂಧಿಕರು ನೋಡುವ ಹಾಗಿಲ್ಲ ಏಕೆಂದರೆ ಅವರನ್ನು ಐ ಸಿ ಯು (ICU)  ಘಟಕದಲ್ಲಿ ಪರದೆಗಳ ಮಧ್ಯದಲ್ಲಿ, ಕೊಳವೆಗಳ ಮತ್ತು ಮಷಿನ್ನಗಳನ್ನು ಆವರಿಸಿಕೊಂಡು ಬಿದ್ದಿರುತ್ತಾರೆ. ಆಗಾಗ  ನೋಡುವುದೇ ನರ್ಸ್ ಮಾತ್ರ  ಮತ್ತು ಅವಳೇ ಸುದ್ದಿ   ಅಲ್ಲ,  ತಪ್ಪು ಮರಣ ವಾರ್ತೆ ಡಾಕ್ಟರಿಗೆ ಮುಟ್ಟಿಸುವುದು. ನಂತರ  ಇತರರಿಗೆ ತಿಳಿಸುವುದು. ಕೆಲವೂಮ್ಮೆ ವ್ಯಕ್ತಿ ಸಾಯುವಾಗ ನರ್ಸ್ ಅವನ ಕೈಯನ್ನು ಹಿಡಿದಿರುತ್ತಾಳೆ. ಆದ ಕಾರಣ ಸಾಯೋಕಾಲದಲ್ಲಿ  ನೆರವಾಗುವವರೇ ನರ್ಸ್ ಗಳು, ಬಾಂಧವರಲ್ಲ. ಇದೇ ಪರಿಸ್ಥಿತಿ ಹಳ್ಳಿಯ ಆಸ್ಪತ್ರೆಗಳಲ್ಲೂ  ಉಂಟಾಗಿದೆ.
                 ನಿಮ್ಮಲ್ಲಿ  ಕೆಲವರಿಗೆ ಏನಾದರೂ ಆಸೆಯಿದ್ದು ನರ್ಸ್ ನ್ನು ನೋಡಿಕೊಂಡು  ಸಾಯಬೇಕೆನಿಸಿದರೆ ಈಗಲೇ ನಿಮ್ಮ ಹುಡುಕಾಟ ಶುರುಮಾಡಿಕೊಳ್ಳಿ  , ಸಾಧ್ಯವಾದರೆ ಕೊನೆಯ ಆಸೆಯೆಂದು ಚೀಟಿಯಲ್ಲಿ ಬರೆದಿಟ್ಟುಕೊಂಡಿರಿ  ..ಏಕೆಂದರೆ ಸಾಯುವಾಗಲಾದರೂ ನಿಮ್ಮ ಆಸೆ ಪೂರೈಸಬೇಡವೇ???