Tuesday 19 December 2017

"ಓಣಿಯನ್ ದೋಶ " ಎಂಬುದು


                    ಈ ಪ್ರಪಂಚದಲ್ಲಿ ಎಷ್ಟು  ರೀತಿಯ  , ಎಷ್ಟು ಬಗೆಯ  ಎಷ್ಟು ದೋಷಗಳಿರುವುದೋ ಆ ದೇವರೇ ಬಲ್ಲ.  ಪ್ರಾಣಿಗಳಿಗೂ ಮತ್ತು  ಮನುಷ್ಯರಿಗೂ  ಬರುವ  ಯಾವುದಾದರು  ದೋಷ,  ಪ್ರಾಣಿ   ಅಥವಾ ಮನುಷ್ಯರಿಂದ  ಬಂದಿರುವಂತಹುದು  ಎಂದು   ಯಾವ ಯಾವ ಶಾಸ್ತ್ರಗಳಲ್ಲೋ ಬರೆದಿರುವುದನ್ನು ಯಾರು ಯಾರೋ   ಹೇಳುವುದನ್ನು  ನಾನು ಕೇಳಿಸಿಕೊಂಡಿದ್ದೇನೆ.  ಆದರೆ  ಸಂದರ್ಭ  ಮತ್ತು  ಸನ್ನಿವೇಶಗಳು ಮಾತ್ರ  ಬೇರೆ .   ಬಹುಶ:  ನೀವು ಕೂಡ  ಹಾಗೆ ಕೇಳಿಸಿಕೊಂಡಿರಬಹುದು ಹಾಗು ನಂಬಿರಲೂಬಹುದು  ಎಂದು ನನ್ನ  ಅನಿಸಿಕೆ . ಈಗ  ಯಾಕೆ  ದೋಷ  ವಿಚಾರ  ಎಂದು ಮನಸ್ಸಿಗೆ  ಗೊಂದಲವಾಯಿತೇ ?  

                   ನೀವು  ಕನ್ನಡ ಭಾಷೆ    ಓದುವವರಾದರೆ ಸಾಕು  ,' ಶ' ಮತ್ತು' ಷ ' ಅಕ್ಷರಕ್ಕೂ ಇರುವಂತಹ ವ್ಯತ್ಯಾಸವನ್ನು  ಸುಲಭವಾಗಿ  ಹೇಳುತ್ತಾರೆ. ಆದರೆ  ಪದಗಳ  ಜೊತೆ  ಉಪಯೋಗಿಸಿದರೆ  ಅರ್ಥವಾಗುವುದೋ ಅಥವಾ  ಅಪಾರ್ಥವಾಗುವುದೋ  ಎಂಬುದು  ಓದುವವರ , ಕೇಳಿಸಿಕೊಳ್ಳುವವರ  ಅಥವಾ  ಹೇಳುವವರಿಗೆ ಸಂಬಂಧಪಟ್ಟಿದ್ದು.  ಇದರ ಜೊತೆಗೆ  ನಮ್ಮ  ದೇಶದ ಭಾಷೆಗಳಲ್ಲೂ   ಒಂದೇ  ವಸ್ತು  ಅಥವಾ  ಪದಾರ್ಥಕ್ಕೆ ಬೇರೆ ಬೇರೆ  ರೀತಿಯ  ಸಂಬೋಧನೆ / ಉಚ್ಚಾರಣೆ  ಇದೆ.   ಈಗ  ಶುರುವಾಗುತ್ತೆ  ನೋಡಿ   ದೋಶ, ಅರ್ಥಾತ್   ನಾವು ತಿನ್ನುವ ಸಾದಾ  ದೋಸೆ, ಮಸಾಲೆ ದೋಸೆ, ಕಾಲಿ  ದೋಸೆ ಇತ್ಯಾದಿ . ದೋಸೈ  ಎಂದು  ತಮಿಳಿನವರೋ , ದೋಸಾ ಎಂದು  ತೆಲುಗಿನವರೋ  ಉಚ್ಚರಿಸುವುದು   ಎಂದು  ಗಮನಿಸಿದ್ದೇವೆ.  ಆದರೆ  ಮಲಯಾಳಿಗಳು  ಮಾತ್ರ  ನಮ್ಮ ದೋಸೆಯನ್ನು  ' ದೋಶ'  ಎಂದೇ  ಕರೆಯುವುದು.  ನಮ್ಮ  ದೋಸೆಗೆ  ನೀವು ಏನೇ  ಕರೆದರೂ  ಅಪಚಾರವಾಗುವುದಿಲ್ಲ  ಬಿಡಿ.  ಬಿಸಿಯಾಗಿ,  ರುಚಿಯಾಗಿ  ನಿಮ್ಮ ನಾಲಿಗೆ  ರುಚಿಗೆ  ಸರಿಯಾಗಿ  ತಯಾರಾಗುತ್ತದೆ.  

               ಹೋಟೆಲ್ ನಲ್ಲಿ  ಸ್ನೇಹಿತರೊಂದಿಗೆ  ಕುಳಿತಿದ್ದಾಗ  ಮಲಯಾಳಿ  ಹೆಂಗಸರ  ಗುಂಪೊಂದು   ತಿಂಡಿಯ ಆರ್ಡರ್  ಕೊಟ್ಟಾಗಲೇ  ಗೊತ್ತಾಗಿದ್ದು   'ದೋಶ'  ಅದರ  ಜೊತೆಗೆ ಓಣಿಯನ್  ಅರ್ಥಾತ್ ಆನಿಯನ್ ದೋಸೆ  ಇಲ್ಲವೇ ಈರುಳ್ಳಿ  ದೋಸೆ ಎಂದು.  ಈ  ಇಂಗ್ಲಿಷ್  ಭಾಷೆಯೇ ಹಾಗೆ  ನೋಡಿ  Dosa  ಎಂದು  ಬರೆದಿರುವುದನ್ನು   ಅವರವರ  ನಾಲಿಗೆಯನ್ನು  ಹೊರಳಿಸಿ  ಉಚ್ಚಾರಣೆ   ಮಾಡಿ ಬಿಡುತ್ತಾರೆ ( ಅವರವರ  ಮಾತೃಭಾಷೆಯ  ಪ್ರಯೋಗದ ಪ್ರಕಾರ).   ವಿದೇಶಿಯೊಬ್ಬ ಉಚ್ಚರಿಸಿದ  ಈ  Dosa ಆಗಿದ್ದು ಮಾತ್ರ  ಡೋಸ  ಹಾಗಾಗಿ  ಅವನು ಆರ್ಡರ್ ಮಾಡಿದ್ದೂ  ಒಂದು ಪ್ಲೇನ್  ಡೋಸ. ಅವನೇನಾದರೂ  ಮಲಯಾಳಿ  ನರ್ಸ್ ಗೆ  ಹೇಳಿದ್ದರೆ  ಒಂದು ಡೋಸ್  ಔಷಧವೇ ಸಿಗುತ್ತಿತ್ತೇನೋ !! 

No comments:

Post a Comment