ವಯಸ್ಸು ಯಾವಾಗ ಆಗುತ್ತದೆ ಎಂದು ಗೊಂದಲ . ಕಾರಣವೆಂದರೆ ಇತ್ತೀಚಿಗೆ " ನಮ್ಮ ಮೆಟ್ರೋ " ರೈಲು ಪ್ರಯಾಣದಲ್ಲಿ ಯುವಕರಿಗಿಂತ ಮುದುಕರು, ಅಂಗವಿಕಲರು ಹಾಗು ವಿಶೇಷ ವ್ಯಕ್ತಿಗಳು ( special abled ) ಹೆಚ್ಚಾಗುತ್ತಿರುವರೆಂದು ನನ್ನ ಅನಿಸಿಕೆ . ಅದರಲ್ಲೂ ಬಹಳ ಓದಿಕೊಂಡಿರುವವರು , ಉದ್ಯೋಗ ಮಾಡುತ್ತಿರುವವರು , ಒಳ್ಳೆಯ ಬಟ್ಟೆಗಳನ್ನು ಧರಿಸಿರುವ ಯುವಕ ಮತ್ತು ಯುವತಿಯರು .
ನೀವು ಮೆಟ್ರೋ ರೈಲು ಪ್ರಯಾಣಕ್ಕೆ ಪ್ಲಾಟ್ ಫಾರಂಗೆ ಹೋಗಲು ಇರುವ ಲಿಫ್ಟ್ ಉಪಯೋಗಿಸಲು ಇರುವ ಫಲಕದ ಮೇಲೆ ' ಹಿರಿಯ ನಾಗರಿಕರಿಗೆ ' ಹಾಗು ' ವಿಕಲ ಚೇತನರಿಗೆ ' ಮಾತ್ರ ಎಂದು ಬರೆದಿರುವುದನ್ನು ಗಮನಿಸಿರಿ. ಅಂದರೆ ಗೊಂದಲದ ಪ್ರಶ್ನೆಯೇನೆಂದರೆ ಅಲ್ಲಿ ಲಿಫ್ಟ್ ಉಪಯೋಗಿಸುವ ಶೇಕಡಾ 9೦ ರಷ್ಟು ಪ್ರಯಾಣಿಕರು ನೋಡಲು ಹಿರಿಯ ನಾಗರಿಕರು ಹಾಗು ವಿಕಲಚೇತನರ ಹಾಗೆ ಕಾಣುವುದೇ ಇಲ್ಲ . ಹಲವು ದಿನಗಳಿಂದ ನನಗೆ ಮನಸ್ಸಿಗೆ ಬಂದ ವಿಷಯವೇನೆಂದರೆ ನಮ್ಮ ಬೆಂಗಳೂರಿನಲ್ಲಿ ಹಿರಿಯ ನಾಗರಿಕರು ಹಾಗು ವಿಕಲಚೇತನರ ಸಂಖ್ಯೆ ನಮ್ಮ ಮೆಟ್ರೋ ಪ್ರಾರಂಭವಾದ ಮೇಲೆ ಹೆಚ್ಚಿದೆಯೇ ಇಲ್ಲವೇ ಬೇರೆಯೇ ಕಾರಣವಿರಬಹುದೇ .
ವೈದ್ಯ ಪುಸ್ತಕದ ಪುಟಗಳಲ್ಲಿ ಓದಿದ ನೆನಪಾಗಿ ಈ ಮಾತು ಹೇಳುತ್ತೇನೆ. ಕೆಲವರಿಗೆ ಹುಟ್ಟಿದ ದಿನಾಂಕದ ಆಧಾರದ ಮೇಲೆ ದೇಹದ ವಯಸ್ಸು ಎಂದಾದರೆ ಕೆಲವರಿಗೆ ಮಾನಸಿಕವಾಗಿಯೇ ಮುಪ್ಪಿನ ವಯಸ್ಸು ಬಂದಿರುವುದೆಂದು ನಂಬಿಕೆ . ಹಾಗೇನಾದರೂ ನಮ್ಮ ಬೆಂಗಳೂರು ಯುವಕರು ಯುವತಿಯರು 2 ನೇ ಗುಂಪಿನ ವರ್ಗಕ್ಕೆ ಸೇರಿಕೊಂಡರೆ ಅಥವಾ ಬೆಂಗಳೂರಿನ ಜೀವನ ಶೈಲಿ ಅವರನ್ನು ಬೇಗನೆ ಮುಪ್ಪಾಗಿಸಿ , ಹಿರಿಯ ನಾಗರಿಕರನ್ನಾಗಿ ಮಾಡಿತೇ , ಇಲ್ಲವೇ ಕಣ್ಣಿಗೆ ಸುಂದರವಾಗಿ , ಆರೋಗ್ಯವಾಗಿ ಕಾಣುವ ಯುವ ಜನಾಂಗದಲ್ಲಿ ಅಂಗವಿಕಲರು ಅಥವಾ ವಿಕಲ ಚೇತನರು ಹೆಚ್ಚಾದರೆ ..!!
ಯಾವುದಕ್ಕೂ ಗಮನವಿರಲಿ ನೀವು ಬಳಸುವ ಲಿಫ್ಟ್ ಮೇಲೆ ಬರೆದಿರುವ ಸೂಚನೆಯನ್ನು ಓದಿ ಆಮೇಲೆ ನೀವೇ ತೀರ್ಮಾನಿಸಿಕೊಳ್ಳಿರಿ , ನೀವು ಹಿರಿಯ ನಾಗರೀಕರೋ , ದುರ್ಬಲರೋ ಅಥವಾ ವಿಕಲಚೇತನರೋ ? ಎಂದು . ನಮ್ಮನ್ನು ಹೊರಗಿನ ಜನ ಯಾರೆಂದು ಗಮನಿಸುತ್ತಿರುತ್ತಾರೆ ಎಂಬುದು ಎಚ್ಚರವಿರಲಿ.