Monday 1 January 2018

ಅಯ್ಯೋ ವಯಸ್ಸಾಯಿತೇ - ಮೆಟ್ರೋ ರೈಲು ಕೃಪೆ .

ವಯಸ್ಸು ಯಾವಾಗ ಆಗುತ್ತದೆ ಎಂದು ಗೊಂದಲ . ಕಾರಣವೆಂದರೆ  ಇತ್ತೀಚಿಗೆ " ನಮ್ಮ ಮೆಟ್ರೋ " ರೈಲು ಪ್ರಯಾಣದಲ್ಲಿ ಯುವಕರಿಗಿಂತ  ಮುದುಕರು, ಅಂಗವಿಕಲರು ಹಾಗು ವಿಶೇಷ ವ್ಯಕ್ತಿಗಳು ( special abled ) ಹೆಚ್ಚಾಗುತ್ತಿರುವರೆಂದು ನನ್ನ  ಅನಿಸಿಕೆ . ಅದರಲ್ಲೂ ಬಹಳ ಓದಿಕೊಂಡಿರುವವರು , ಉದ್ಯೋಗ ಮಾಡುತ್ತಿರುವವರು , ಒಳ್ಳೆಯ ಬಟ್ಟೆಗಳನ್ನು ಧರಿಸಿರುವ ಯುವಕ ಮತ್ತು ಯುವತಿಯರು . 
                ನೀವು ಮೆಟ್ರೋ ರೈಲು ಪ್ರಯಾಣಕ್ಕೆ ಪ್ಲಾಟ್ ಫಾರಂಗೆ ಹೋಗಲು ಇರುವ ಲಿಫ್ಟ್ ಉಪಯೋಗಿಸಲು ಇರುವ ಫಲಕದ ಮೇಲೆ ' ಹಿರಿಯ ನಾಗರಿಕರಿಗೆ ' ಹಾಗು ' ವಿಕಲ ಚೇತನರಿಗೆ '  ಮಾತ್ರ  ಎಂದು ಬರೆದಿರುವುದನ್ನು  ಗಮನಿಸಿರಿ.  ಅಂದರೆ ಗೊಂದಲದ  ಪ್ರಶ್ನೆಯೇನೆಂದರೆ  ಅಲ್ಲಿ ಲಿಫ್ಟ್ ಉಪಯೋಗಿಸುವ ಶೇಕಡಾ 9೦ ರಷ್ಟು  ಪ್ರಯಾಣಿಕರು ನೋಡಲು  ಹಿರಿಯ ನಾಗರಿಕರು  ಹಾಗು ವಿಕಲಚೇತನರ ಹಾಗೆ  ಕಾಣುವುದೇ ಇಲ್ಲ .  ಹಲವು ದಿನಗಳಿಂದ  ನನಗೆ ಮನಸ್ಸಿಗೆ ಬಂದ ವಿಷಯವೇನೆಂದರೆ  ನಮ್ಮ ಬೆಂಗಳೂರಿನಲ್ಲಿ ಹಿರಿಯ  ನಾಗರಿಕರು  ಹಾಗು ವಿಕಲಚೇತನರ ಸಂಖ್ಯೆ  ನಮ್ಮ ಮೆಟ್ರೋ  ಪ್ರಾರಂಭವಾದ  ಮೇಲೆ  ಹೆಚ್ಚಿದೆಯೇ ಇಲ್ಲವೇ ಬೇರೆಯೇ ಕಾರಣವಿರಬಹುದೇ .  
          ವೈದ್ಯ ಪುಸ್ತಕದ ಪುಟಗಳಲ್ಲಿ  ಓದಿದ ನೆನಪಾಗಿ  ಈ ಮಾತು ಹೇಳುತ್ತೇನೆ. ಕೆಲವರಿಗೆ    ಹುಟ್ಟಿದ  ದಿನಾಂಕದ ಆಧಾರದ ಮೇಲೆ ದೇಹದ ವಯಸ್ಸು ಎಂದಾದರೆ ಕೆಲವರಿಗೆ  ಮಾನಸಿಕವಾಗಿಯೇ ಮುಪ್ಪಿನ ವಯಸ್ಸು ಬಂದಿರುವುದೆಂದು ನಂಬಿಕೆ .  ಹಾಗೇನಾದರೂ ನಮ್ಮ ಬೆಂಗಳೂರು  ಯುವಕರು  ಯುವತಿಯರು 2 ನೇ ಗುಂಪಿನ ವರ್ಗಕ್ಕೆ ಸೇರಿಕೊಂಡರೆ ಅಥವಾ ಬೆಂಗಳೂರಿನ ಜೀವನ ಶೈಲಿ ಅವರನ್ನು ಬೇಗನೆ  ಮುಪ್ಪಾಗಿಸಿ , ಹಿರಿಯ ನಾಗರಿಕರನ್ನಾಗಿ ಮಾಡಿತೇ , ಇಲ್ಲವೇ  ಕಣ್ಣಿಗೆ ಸುಂದರವಾಗಿ  , ಆರೋಗ್ಯವಾಗಿ ಕಾಣುವ ಯುವ ಜನಾಂಗದಲ್ಲಿ  ಅಂಗವಿಕಲರು ಅಥವಾ  ವಿಕಲ ಚೇತನರು ಹೆಚ್ಚಾದರೆ ..!! 
        ಯಾವುದಕ್ಕೂ ಗಮನವಿರಲಿ ನೀವು ಬಳಸುವ ಲಿಫ್ಟ್ ಮೇಲೆ  ಬರೆದಿರುವ  ಸೂಚನೆಯನ್ನು  ಓದಿ ಆಮೇಲೆ ನೀವೇ ತೀರ್ಮಾನಿಸಿಕೊಳ್ಳಿರಿ ,  ನೀವು ಹಿರಿಯ ನಾಗರೀಕರೋ , ದುರ್ಬಲರೋ ಅಥವಾ ವಿಕಲಚೇತನರೋ ?   ಎಂದು  . ನಮ್ಮನ್ನು  ಹೊರಗಿನ ಜನ ಯಾರೆಂದು  ಗಮನಿಸುತ್ತಿರುತ್ತಾರೆ ಎಂಬುದು ಎಚ್ಚರವಿರಲಿ.

No comments:

Post a Comment