Tuesday, 19 December 2017

ಮದ್ಯಪಾನದಿಂದ ಭಾಷೆ ಕಲಿಕೆ ಸುಲಭ ಹಾಗು ಸ್ಪಷ್ಟ


               ಈ ಸುದ್ದಿಯನ್ನು  ಇತ್ತೀಚಿನ ದಿನ ಪತ್ರಿಕೆಯಲ್ಲಿ ಓದಿ  ಖುಷಿಗೊಂಡೆ. ಮದ್ಯಪಾನ ಸೇವನೆಯಿಂದ ಕೆಲವರ ದೇಹ , ಮನಸ್ಸು, ಹೃದಯ, ತಲೆಭಾರ ಇತ್ಯಾದಿಗಳು  ಹಗುರವಾಗುವುದೆಂದು  ಅದರಿಂದ  ಅವರವರಿಗೆ   ಆದ ಅನುಭವದ  ಆಧಾರದ  ಮೇಲೆ ಕೇಳಿ  ತಿಳಿದುಕೊಂಡಿದ್ದೆ.  ಆದರೆ  ಇತ್ತೀಚಿಗೆ  ಡೆನ್ಮಾರ್ಕ್  ದೇಶದಲ್ಲಿ ನಡೆಸಿರುವ  ಅಧ್ಯಯನದ ಪ್ರಕಾರ  ಮದ್ಯಪಾನ  ಸೇವನೆಯಿಂದ  ಕಲಿಕೆ  ಸುಲಭ ಹಾಗು  ಭಾಷೆ ಸ್ಪಷ್ಟ ಎಂದು  ತಿಳಿಸಿರುವುದು, ವಿವಿಧ ಭಾಷೆ ಕಲಿಯುವ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿರುತ್ತದೆ. 
                         
                ಮದ್ಯಪಾನ  ಸೇವನೆ ಮಿತಿ ಮೀರುತ್ತ ಹೋಗುತ್ತಿದ್ದಂತೆ ಭಾಷೆ  ಅಸ್ಪಷ್ಟವಾಗುವುದು ಸಾಮಾನ್ಯ  ಎಂದು ಹಲವರ ನಂಬಿಕೆ  . ಆದರೆ  ಅದೇ  ಒಂದು  ವಿಚಿತ್ರ ಭಾಷೆ ಯಾಕಿರಬಾರದು  ಎಂದು ಇನ್ನಿತರರ ವಾದ . ಅಸ್ಪಷ್ಟತೆಯೇ ಸ್ಪಷ್ಟತೆಯೋ ಅಥವಾ  ಸ್ಪಷ್ಟತೆಯೇ ಅಸ್ಪಷ್ಟತೆಯೋ ಎಂಬುದು  ಗೊಂದಲದ ವಿಷಯ . ಡೆನ್ಮಾರ್ಕ್ ದೇಶದಲ್ಲಿ  ಮದ್ಯಪಾನ  ಸಾಮಾನ್ಯ  ವಿಷಯ ಹಾಗು ಮದ್ಯಪಾನ  ಸೇವನೆಗೆ ನಿರ್ಬಂಧವಿಲ್ಲ ಇಂತಹ  ಪರಿಸ್ಥಿತಿಯಲ್ಲಿ  ಅಲ್ಲಿ  ವರದಿಯಾಗಿರುವ ಸಂಶೋಧನೆ  ಅವರಿಗೆ  ಅನ್ವಯಿಸುತ್ತದೆ,  ಆದರೆ  ಅದನ್ನೇ ನಾವು ಅಳವಡಿಸಿಕೊಳ್ಳಲು  ಪ್ರಯತ್ನಿಸಿದರೆ  ವಿದ್ಯಾರ್ಥಿಗಳನ್ನು ಮದ್ಯಪಾನ  ಸೇವಿಸಲು ಪ್ರೋತ್ಸಾಹಿಸಬೇಕಾಗಬಹುದು.  ಸಂಶೋಧನಾ ವರದಿಯು ಮದ್ಯಪಾನ  ಸೇವನೆ  ನಂತರ  ಅಥವಾ ಮದ್ಯಪಾನ  ಸೇವಿಸಿದಾಗ  ಮಾತ್ರ  ಭಾಷೆ ಕಲಿಕೆ  ಸುಲಭ  ಎಂಬುದನ್ನು ಸ್ಪಷ್ಟವಾಗಿ  ತಿಳಿಸಿಲ್ಲ. 

               ಮದ್ಯಪಾನದ ಅಮಲಿನಲ್ಲಿ ಇದ್ದಾಗ  ಆಲೋಚನೆಗಳು  ಭಾಷೆಗಳಾಗಿ  ಪರಿವರ್ತನೆಯಾಗಿ  ಅದು ಸ್ಪಷ್ಟವಾಗಿ  ಗೊತ್ತಾಗುವುದಿಲ್ಲ.  ನಮ್ಮಲ್ಲಿ  ವಿವಿಧ  ರೀತಿಯ  ರಂಗಿನ , ಅಶ್ಲೀಲ ,  ಅಸಂಬದ್ಧ,  ಮೋಜಿಗಾಗಿ  ಎಂದೇ ಮದ್ಯಪಾನ  ಸೇವಿಸಿ  ವಿವಿಧ  ಅಂಗಭಾವಗಳಿಂದ  ಪಾನಮತ್ತರಾಗುತ್ತಾರೆ ಹಾಗು  ರಂಜಿಸುತ್ತಾರೆ.   ಹಾಗೆಯೇ ಮದ್ಯಪಾನ  ಸೇವಿಸಿದ  ಸಮಯದಲ್ಲಿ  ಅವರಿಗೆ  ತಿಳಿಯದೆಯಿರುವ   ಹೊಸ ಭಾಷೆ  ಬಳಕೆಯಾಗಿರುವುದು ಕಂಡುಬಂದಿದೆ. ಆದರೆ  ಯಾವ ಭಾಷೆ  ಎಂದು ಹೇಳಿದವರಿಗಾಗಲಿ , ಕೇಳುವವರಿಗಾಗಲಿ ತಿಳಿದಿಲ್ಲ,  ಅಲ್ಲದೆ   ಭಾಷೆಯ ಅರ್ಥವು ತಿಳಿದಿಲ್ಲ  . ಆದರೆ  ತಿಳಿದಿರುವುದು ಅವನು ಮಾತನಾಡುತ್ತಿರುವುದು ಹಾಗು  ಭಾವನೆಗಳು ಮಾತ್ರ.

"ಓಣಿಯನ್ ದೋಶ " ಎಂಬುದು


                    ಈ ಪ್ರಪಂಚದಲ್ಲಿ ಎಷ್ಟು  ರೀತಿಯ  , ಎಷ್ಟು ಬಗೆಯ  ಎಷ್ಟು ದೋಷಗಳಿರುವುದೋ ಆ ದೇವರೇ ಬಲ್ಲ.  ಪ್ರಾಣಿಗಳಿಗೂ ಮತ್ತು  ಮನುಷ್ಯರಿಗೂ  ಬರುವ  ಯಾವುದಾದರು  ದೋಷ,  ಪ್ರಾಣಿ   ಅಥವಾ ಮನುಷ್ಯರಿಂದ  ಬಂದಿರುವಂತಹುದು  ಎಂದು   ಯಾವ ಯಾವ ಶಾಸ್ತ್ರಗಳಲ್ಲೋ ಬರೆದಿರುವುದನ್ನು ಯಾರು ಯಾರೋ   ಹೇಳುವುದನ್ನು  ನಾನು ಕೇಳಿಸಿಕೊಂಡಿದ್ದೇನೆ.  ಆದರೆ  ಸಂದರ್ಭ  ಮತ್ತು  ಸನ್ನಿವೇಶಗಳು ಮಾತ್ರ  ಬೇರೆ .   ಬಹುಶ:  ನೀವು ಕೂಡ  ಹಾಗೆ ಕೇಳಿಸಿಕೊಂಡಿರಬಹುದು ಹಾಗು ನಂಬಿರಲೂಬಹುದು  ಎಂದು ನನ್ನ  ಅನಿಸಿಕೆ . ಈಗ  ಯಾಕೆ  ದೋಷ  ವಿಚಾರ  ಎಂದು ಮನಸ್ಸಿಗೆ  ಗೊಂದಲವಾಯಿತೇ ?  

                   ನೀವು  ಕನ್ನಡ ಭಾಷೆ    ಓದುವವರಾದರೆ ಸಾಕು  ,' ಶ' ಮತ್ತು' ಷ ' ಅಕ್ಷರಕ್ಕೂ ಇರುವಂತಹ ವ್ಯತ್ಯಾಸವನ್ನು  ಸುಲಭವಾಗಿ  ಹೇಳುತ್ತಾರೆ. ಆದರೆ  ಪದಗಳ  ಜೊತೆ  ಉಪಯೋಗಿಸಿದರೆ  ಅರ್ಥವಾಗುವುದೋ ಅಥವಾ  ಅಪಾರ್ಥವಾಗುವುದೋ  ಎಂಬುದು  ಓದುವವರ , ಕೇಳಿಸಿಕೊಳ್ಳುವವರ  ಅಥವಾ  ಹೇಳುವವರಿಗೆ ಸಂಬಂಧಪಟ್ಟಿದ್ದು.  ಇದರ ಜೊತೆಗೆ  ನಮ್ಮ  ದೇಶದ ಭಾಷೆಗಳಲ್ಲೂ   ಒಂದೇ  ವಸ್ತು  ಅಥವಾ  ಪದಾರ್ಥಕ್ಕೆ ಬೇರೆ ಬೇರೆ  ರೀತಿಯ  ಸಂಬೋಧನೆ / ಉಚ್ಚಾರಣೆ  ಇದೆ.   ಈಗ  ಶುರುವಾಗುತ್ತೆ  ನೋಡಿ   ದೋಶ, ಅರ್ಥಾತ್   ನಾವು ತಿನ್ನುವ ಸಾದಾ  ದೋಸೆ, ಮಸಾಲೆ ದೋಸೆ, ಕಾಲಿ  ದೋಸೆ ಇತ್ಯಾದಿ . ದೋಸೈ  ಎಂದು  ತಮಿಳಿನವರೋ , ದೋಸಾ ಎಂದು  ತೆಲುಗಿನವರೋ  ಉಚ್ಚರಿಸುವುದು   ಎಂದು  ಗಮನಿಸಿದ್ದೇವೆ.  ಆದರೆ  ಮಲಯಾಳಿಗಳು  ಮಾತ್ರ  ನಮ್ಮ ದೋಸೆಯನ್ನು  ' ದೋಶ'  ಎಂದೇ  ಕರೆಯುವುದು.  ನಮ್ಮ  ದೋಸೆಗೆ  ನೀವು ಏನೇ  ಕರೆದರೂ  ಅಪಚಾರವಾಗುವುದಿಲ್ಲ  ಬಿಡಿ.  ಬಿಸಿಯಾಗಿ,  ರುಚಿಯಾಗಿ  ನಿಮ್ಮ ನಾಲಿಗೆ  ರುಚಿಗೆ  ಸರಿಯಾಗಿ  ತಯಾರಾಗುತ್ತದೆ.  

               ಹೋಟೆಲ್ ನಲ್ಲಿ  ಸ್ನೇಹಿತರೊಂದಿಗೆ  ಕುಳಿತಿದ್ದಾಗ  ಮಲಯಾಳಿ  ಹೆಂಗಸರ  ಗುಂಪೊಂದು   ತಿಂಡಿಯ ಆರ್ಡರ್  ಕೊಟ್ಟಾಗಲೇ  ಗೊತ್ತಾಗಿದ್ದು   'ದೋಶ'  ಅದರ  ಜೊತೆಗೆ ಓಣಿಯನ್  ಅರ್ಥಾತ್ ಆನಿಯನ್ ದೋಸೆ  ಇಲ್ಲವೇ ಈರುಳ್ಳಿ  ದೋಸೆ ಎಂದು.  ಈ  ಇಂಗ್ಲಿಷ್  ಭಾಷೆಯೇ ಹಾಗೆ  ನೋಡಿ  Dosa  ಎಂದು  ಬರೆದಿರುವುದನ್ನು   ಅವರವರ  ನಾಲಿಗೆಯನ್ನು  ಹೊರಳಿಸಿ  ಉಚ್ಚಾರಣೆ   ಮಾಡಿ ಬಿಡುತ್ತಾರೆ ( ಅವರವರ  ಮಾತೃಭಾಷೆಯ  ಪ್ರಯೋಗದ ಪ್ರಕಾರ).   ವಿದೇಶಿಯೊಬ್ಬ ಉಚ್ಚರಿಸಿದ  ಈ  Dosa ಆಗಿದ್ದು ಮಾತ್ರ  ಡೋಸ  ಹಾಗಾಗಿ  ಅವನು ಆರ್ಡರ್ ಮಾಡಿದ್ದೂ  ಒಂದು ಪ್ಲೇನ್  ಡೋಸ. ಅವನೇನಾದರೂ  ಮಲಯಾಳಿ  ನರ್ಸ್ ಗೆ  ಹೇಳಿದ್ದರೆ  ಒಂದು ಡೋಸ್  ಔಷಧವೇ ಸಿಗುತ್ತಿತ್ತೇನೋ !! 

Thursday, 22 December 2016

ಇದೊಂಥರ ಭಯ

                ಮೊನ್ನೆ ನಮ್ಮ ಮನೆಗೆ ನನ್ನ ಸ್ವಲ್ಪ ದೂರದ ಸಂಬಂಧಿಕರು ಮದುವೆಗೆ ಕರೆಯೋಲೆ ಕೊಡಲು ಬಂದಿದ್ದರು. ಮೂರು ಜನರು ಲಗ್ನ ಪತ್ರಿಕೆ ಹಂಚಲು ಹೋಗಬಾರದೆಂಬ ನಂಬಿಕೆಯಿಂದ  ನಾಲ್ಕು  ಜನರಿದ್ದ ಟೀಮು ನಮ್ಮ ಮನೆಗೂ ಬಂದಿದ್ದರುಮೂರು ಹೆಂಗಸರು ಮತ್ತು ಒಬ್ಬ ಗಂಡಸು ಅಥವಾ ಮೂವರು ಹೆಂಗಸರನ್ನು ತನ್ನ ಕಾರಿನಲ್ಲಿ ಗಂಡಸು ಡ್ರೈವ್ ಮಾಡಿಕೊಂಡು ಬಂದಿದ್ದ. ಅವರ ಹೆಸರು ಅವರ ಹೆಸರು  ಹೇಳುವ ಅವಶ್ಯಕತೆಯಿಲ್ಲ ಬಿಡಿ.


          ಅವರಲ್ಲಿದ್ದ  ಒಬ್ಬ ಹೆಂಗಸು ಮಾತ್ರ ಬಹಳ ಸ್ವಾರಸ್ಯಕರವಾಗಿ ಮಾತನಾಡುತ್ತಿದ್ದರು. ಮಕ್ಕಳು, ನೆಂಟರು , ಇತ್ಯಾದಿ ಇಷಯಗಳ ಉಭಯ ಕುಶಲೋಪರಿಗಳನ್ನು ಮಾತನಾಡುತ್ತ, ಆಗಿ ಪ್ರತಿಯೊಂದು ವಿಷಯಕ್ಕೂ ' ಅದಕ್ಕೆ ನಂಗೆ ಒಂಥರಾ ಭಯ ' ಎಂದು ಪದೇ ಪದೇ ಹೇಳುತ್ತಿದ್ದರು.  ನಿಮಗೆ ಅರ್ಥವಾಗಲಿಲ್ಲ ಅಂತ ಕಾಣುತ್ತೆ. ಸ್ಪಷ್ಟ್ವವಾಗಿ ಹೇಳೇಬಿಡ್ತೀನಿ, ಬಿಡಿ . ' ಯಾರೇ ಗಟ್ಟಿಯಾಗಿ ಮಾತನಾಡಲಿ ನನಗೆ ಒಂಥರಾ ಭಯ '  ಎಂದು ಪ್ರಾರಂಭವಾದದ್ದು  ಜ್ಞಾಪಕ.'  ಆಮೇಲೆ ಮನೆಗೆ ಮಕ್ಕಳು ಸಮಯಕ್ಕ ಮನೆಗೆ ಬರಲಿಲ್ಲ ಎಂದರೆ ಇದೊಂಥರ ಭಯ ಶುರುವಾಗುತ್ತೆ ' . ' ಟಿವಿಯಲ್ಲಿ ಕೆಳಭಾಗದಲ್ಲಿ ಅಪಘಾತ , ಸಾವು ...ಹೀಗೆ ಸಾಲುಗಳು ಬರುತ್ತಿದ್ದರೆ , ನಮ್ಮ ಯಜಮಾನರು ಮನೆಗೆ ಇನ್ನು ಬರದಿದ್ದರೆ ಇದೊಂಥರಾ ಭಯ ಆಗುತ್ತೆ ', ' ಈ ಪರೀಕ್ಷೆಗಳನ್ನು ಬರೆದು  ಇಂಜಿನಿಯರ್ ಸೀಟು ಸಿಗುತ್ತಾ ಅನ್ನೋದು ಇನ್ನೊಂಥರ ಭಯ ", ' ಯಜಮಾನರು ನಾನು ಮಾಡಿದ ಅಡುಗೆ ಸ್ವಲ್ಪ ಹೆಚ್ಚು ಕಡಿಮೆಯಾಗಿ ಊಟ ಮಾಡದೇಯಿರೋದೇ  ಇನ್ನೊಂಥರ ಭಯ '. ಇತ್ಯಾದಿ ಥರಾ ಥರಾ ಭಯದ  ವಾತಾವರಣ ಪರಿಚಯಿಸುತ್ತಿದ್ದರು.


          ನನಗೆ ಅನುಮಾನ . ಭಯ ಎಂದರೆ ಅದರಲ್ಲಿಯೂ ಪಂಗಡಗಳು, ವಿಧಗಳು ಇತ್ಯಾದಿ ಇದೆಯಾ ಎಂದು. ಇದೆ ಎಂದರೆ ಇದೊಂಥರಾ ಭಯ ಶುರುವಾಯ್ತು.

Wednesday, 4 November 2015

ತಲೆ ಮೇಲೆ ಕೈ...


                   ಈ ಶೀರ್ಷಿಕೆ ನೋಡಿ ಯಾವುದೋ ಪ್ರಬಂಧ ಬರೆಯುತ್ತಿದ್ದೇನೆ ಅಂದುಕೊಳ್ಳಬೇಡಿ ಅಥವಾ ನೀವೇ ನಿಮ್ಮ ತಲೆ ಮೇಲೆ ಕೈಯಿಟ್ಟುಕೊಳ್ಳಬೇಡಿ.
                        ಕಳೆದ ವರ್ಷ ನಮ್ಮ ಸ್ನೇಹಿತನೊಬ್ಬ ವ್ಯಾಪಾರಕ್ಕೋಸ್ಕರ ಯಾರಿಗೋ ಬಡ್ಡಿಗೆ ಹಣ ಕೊಟ್ಟನಂತೆ, ಅದೂ ಮೀಟರ್ ಬಡ್ಡಿ ಲೆಕ್ಕವಂತೆ. ಅವನ ಸಾಲಗಾರನೊಬ್ಬ ಅಲ್ಪ ಸ್ವಲ್ಪ ಬಡ್ಡಿ ಕೊಟ್ಟು ಅಸಲು ಆಮೇಲೆ ಕೊಡಬೇಕೆನ್ನುವವನು ಬೆಳ್ಳಂಬೆಳಿಗ್ಗೆ  ಮಾರ್ಕೆಟ್  ಹತ್ತಿರ ಯಾವುದೋ ಲಾರಿಗೆ ಸಿಕ್ಕಿ ಅಲ್ಲೇ ಸತ್ತನಂತೆ. ವಿಷಯ ತಿಳಿದ ಕೂಡಲೇ ನನ್ನ ಸ್ನೇಹಿತ ತಲೆ ಮೇಲೆ ಕೈಯಿಟ್ಟುಕೊಂಡು ಗೋಳೋ ಎಂದು ಅವನ ಹೆಂಡತಿ ಮುಂದೆ ಅತ್ತು ಬಿಟ್ಟನಂತೆ. ಅವಳು ಬಹುಷಃ ಅವರ್ಯಾರೋ ಬಾಲ್ಯ ಸ್ನೇಹಿತರೋ ಇಲ್ಲ ತೀರ ಹತ್ತಿರದ ಸ್ನೇಹಿತರು ಇರಬಹುದು ಎಂದುಕೊಂಡು) ಎಷ್ಟೇ ಸಮಾಧಾನ ಮಾಡಿದರೂ ಸುಧಾರಿಸಲ್ಲಿಲ್ಲವಂತೆ.  ಅವಳಿಗೆ ವಿಷಯ ತಿಳಿಸಿ " ಅವನು ಸತ್ತಿದ್ದಕ್ಕೆ ಅಳುತ್ತಾ ಇಲ್ಲವೇ, ನಾನು ಕೊಟ್ಟ ಹಣ ವಾಪಸ್ಸು ಬರಲ್ಲ. ಹಣ ಕೊಟ್ಟಿದ್ದಕ್ಕೆ ಯಾವುದೇ ಸಾಕ್ಷಿ / ದಾಖಲೆ ತೆಗೆದುಕೊಳ್ಳಲಿಲ್ಲ. ಇನ್ನು ನನ್ನ ಸಂಸಾರವನ್ನು ಹೇಗೆ ಸಾಗಿಸಲಿ ಎಂದು ಗೋಳೋ ಅಂತ ಅತ್ತು ಬಿಟ್ಟನಂತೆ. ಅವನ ಹೆಂಡತಿ ಅವಳ ತಲೆ ಮೇಲೆ ಕೈಯಿಟ್ಟುಕೊಂಡಳಂತೆ. ಇದೇನ್ಯ್ ಹೊಸ ವಿಚಾರ ಅಲ್ಲವೇ ಅಲ್ಲ ಬಿಡಿ.
                         ಆದರೆ ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಬೇಕು? ನೀವು ಯಾವಾಗಲಾದರೂ ನಮ್ಮ ತಲೆ ಮೇಲೆ ಕೈಯಿಟ್ಟುಕೊಂಡಿದ್ದೀರಾ!!  ತಕ್ಷಣ ನೆನಪಿಗೆ ಬರಲಿಲವೇ ? ಹಾಗಾದರೆ ನಿಮ್ಮ ತಲೆ ಮೇಲೆ ಕೈಯಿಟ್ಟುಕೊಂಡು  ಯೋಚಿಸಿ... ನೆನಪಿಗೆ ಬರಬಹುದು.

Thursday, 29 January 2015

ಸಾಯೋಕಾಲದಲ್ಲಿ ಆಗುವವನೇ ಬಾಂಧವ ಅಲ್ಲ ನರ್ಸ್...


                            ಆಶ್ಚರ್ಯವಾಗಬಹುದು  ನಿಮಗೆ ...ಏನು  ಹೀಗೆ ಬರೆದಿದ್ದಾರಲ್ಲ ಎಂದು ಅನಿಸುತ್ತಿರಬಹುದು, ಹಳೇ ಗಾದೆಯನ್ನು ಹೆಚ್ಚಾಗಿ ಬಳಸುತ್ತಿದ್ದುದು  ಮಧ್ಯ ಮತ್ತು ಮುಪ್ಪಿನ ವಯಸ್ಸಿನವರು. ಅವರಿಗೆ ಅದೇ ಚಿಂತೆ. ಸಾಯುವಾಗ ಜೊತೆಗೆ ಯಾರು ಇರುತ್ತಾರೋ , ಹೆಂಡತಿಯೋ ! ಮಕ್ಕಳೋ! ಮೊಮ್ಮಕ್ಕಳೋ! ಮರಿ ಮಕ್ಕಳೋ! ನೆರೆ ಹೊರೆಯವರೋ!  ಇತ್ಯಾದಿ..  ಇದರ ನಂತರ ಹೆಚ್ಚು ಜನರು ಯೋಚಿಸುವುದು ಕಡಿಮೆ. ಇದೆಲ್ಲಾ  ಹಳ್ಳಿಯ ಅಥವಾ ಗ್ರಾಮೀಣ ಜನರು  ಯೋಚಿಸುವ ರೀತಿ ಎಂದು ತಿಳಿಯಬೇಡಿ. ಅಥವಾ ಹಳೆಯ ಮಾತು ಎಂದು ಭಾವಿಸಬೇಡಿ.
                     ಈಗ ಪರಿಸ್ಥಿತಿ ಹಾಗೂ ಸಮಾಜದಲ್ಲಿ ಬದಲಾವಣೆ  ಅನಿವಾರ್ಯವಾಗಿದೆ. ಮನೆಯವರ ಒತ್ತಡ ಇಲ್ಲವೇ ವಿಮಾ ಪ್ರಭಾವದ ಕಾರಣದಿಂದ ಸಾಯೋ ಸಮಯ ಅಥವಾ ಕಾಯಿಲೆ ತೀವ್ರವಾದಾಗ ಆಸ್ಪತ್ರೆ ಸೇರುವುದು ಸಾಮಾನ್ಯವಾಗಿದೆ. ಇಲ್ಲವೇ ಮನೆಯಲ್ಲಿಯೇ ನರ್ಸ್ ರವರ ಸೇವೆ ಪಡೆಯುವ ಕಾಲ ಬಂದಿದೆ. ಆಸ್ಪತ್ರೆಯಲ್ಲಿಯೂ ಕೂಡ  ಸಾಯುವವರನ್ನು ಸಂಬಂಧಿಕರು ನೋಡುವ ಹಾಗಿಲ್ಲ ಏಕೆಂದರೆ ಅವರನ್ನು ಐ ಸಿ ಯು (ICU)  ಘಟಕದಲ್ಲಿ ಪರದೆಗಳ ಮಧ್ಯದಲ್ಲಿ, ಕೊಳವೆಗಳ ಮತ್ತು ಮಷಿನ್ನಗಳನ್ನು ಆವರಿಸಿಕೊಂಡು ಬಿದ್ದಿರುತ್ತಾರೆ. ಆಗಾಗ  ನೋಡುವುದೇ ನರ್ಸ್ ಮಾತ್ರ  ಮತ್ತು ಅವಳೇ ಸುದ್ದಿ   ಅಲ್ಲ,  ತಪ್ಪು ಮರಣ ವಾರ್ತೆ ಡಾಕ್ಟರಿಗೆ ಮುಟ್ಟಿಸುವುದು. ನಂತರ  ಇತರರಿಗೆ ತಿಳಿಸುವುದು. ಕೆಲವೂಮ್ಮೆ ವ್ಯಕ್ತಿ ಸಾಯುವಾಗ ನರ್ಸ್ ಅವನ ಕೈಯನ್ನು ಹಿಡಿದಿರುತ್ತಾಳೆ. ಆದ ಕಾರಣ ಸಾಯೋಕಾಲದಲ್ಲಿ  ನೆರವಾಗುವವರೇ ನರ್ಸ್ ಗಳು, ಬಾಂಧವರಲ್ಲ. ಇದೇ ಪರಿಸ್ಥಿತಿ ಹಳ್ಳಿಯ ಆಸ್ಪತ್ರೆಗಳಲ್ಲೂ  ಉಂಟಾಗಿದೆ.
                 ನಿಮ್ಮಲ್ಲಿ  ಕೆಲವರಿಗೆ ಏನಾದರೂ ಆಸೆಯಿದ್ದು ನರ್ಸ್ ನ್ನು ನೋಡಿಕೊಂಡು  ಸಾಯಬೇಕೆನಿಸಿದರೆ ಈಗಲೇ ನಿಮ್ಮ ಹುಡುಕಾಟ ಶುರುಮಾಡಿಕೊಳ್ಳಿ  , ಸಾಧ್ಯವಾದರೆ ಕೊನೆಯ ಆಸೆಯೆಂದು ಚೀಟಿಯಲ್ಲಿ ಬರೆದಿಟ್ಟುಕೊಂಡಿರಿ  ..ಏಕೆಂದರೆ ಸಾಯುವಾಗಲಾದರೂ ನಿಮ್ಮ ಆಸೆ ಪೂರೈಸಬೇಡವೇ???  




Monday, 24 November 2014

ಮುದುಕರಾದರೂ ಮೀಸೆ ಹಣ್ಣಾಗುವುದಿಲ್ಲ....

            ಒಂದು ಗಾದೆ ಮಾತಿನಂತೆ " ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ " ಎಂದು. ಇದು ಕುಸ್ತಿ ಮಾಡುವ ಜಟ್ಟಿಯ ಚಾಕ್ಯತೆ, ಚಾಣಾಕ್ಷತನವನ್ನು ತೋರಿಸುತ್ತಿತ್ತು. ಕಾಲ ಬದಲಾಗಿದೆ ಜಟ್ಟಿಯು ಮೀಸೆ ಬಿಡುವುದಿಲ್ಲ ಬದಲಿಗೆ ಮೀಸೆಯನ್ನು ನುಣ್ಣಗೆ ಕ್ಷೌರ ಮಾಡಿಸುತ್ತಾನೆ ಮತ್ತು ಮಣ್ಣಿನ ವಾಸನೆಯೇ ಕುಸ್ತಿಯಲ್ಲಿಲ್ಲ. ಈಗ ಹಲಗೆಗಳ ರಂಗ ಮಂಚ ಅಥವಾ ಬಟ್ಟೆಯ ಮಂಚದ ಜಾಗ. ಇನ್ನೂ ಕೆಲವು ವರ್ಷಗಳಲ್ಲಿ ಈ ಗಾದೆಯ ಮಾತು ಉಪಯೋಗಕ್ಕೆ ಬರುವುದಿಲ್ಲ ಎನ್ನೋಣ.

               ಆದರೆ ಮತ್ತೊಂದು ರೀತಿಯಲ್ಲಿ ಈ ಗಾದೆಗೆ ಸೇರಿಸಿಕೊಳ್ಳಬಹುದು. ಅದೇನೆಂದರೆ " ಮುದುಕರಾದರೂ  ಮೀಸೆ ಹಣ್ಣಾಗುವುದಿಲ್ಲ..." ಎಂದು. ಕಾರಣವೇನೆಂದರೆ ಸುಲಭವಾಗಿ ಎಲ್ಲಾ ಅಂಗಡಿಗಳಲ್ಲೂ ಕಡಿಮೆ ದರದಲ್ಲಿ ಎಲ್ಲರಿಗೂ ದೊರೆಯುವ ಕೂದಲಿಗೆ ಹಚ್ಚುವ ಬಣ್ಣಗಳು ಮತ್ತು ಸುದೀರ್ಘವಾಗುತ್ತಿರುವ ಆಯಸ್ಸು. ಇವೆರಡಕ್ಕೂ ರಸಿಕತೆ ಸ್ವಲ್ಪ ಇರಲೇಬೇಕು ಎನ್ನಿ. ತಲೆಯಲ್ಲಿ  ಶೇಕಡ ಎಂಬತ್ತರಷ್ಟು ಕೂದಲುಗಳು ಮಾಯವಾಗಿ ಬಟ್ಟ ಬಯಲಾದ ಮುದುಕರಲ್ಲೂ ಕೂಡ ಮೂಗಿನ ಕೆಳಗೆ ದಪ್ಪಗೆ ಮೀಸೆಯಂತೂ ರಾರಾಜಿಸುತ್ತದೆ. ಈ  ಮೀಸೆಯನ್ನು ಆರೈಕೆ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ ಆದರೆ ಅಂದವಾಗಿ ಕಾಣಲು ರಸಿಕತೆ ಬೇಕೇಬೇಕು.

             ಹಲವು ಯುವಕ ಮುದುಕರೂ ಹಾಗೂ ಹಣ್ಣಾದ ಮುದುಕರೂ ಕೂಡ ಮೀಸೆಯು ಬೆಳ್ಳಗೆ ಕಾಣಲು ಇಷ್ಟ ಪಡುವುದಿಲ್ಲ. ಈ ಕಾರಣದಿಂದ ಮೀಸೆಗೆ ಬಣ್ಣ ಹಚ್ಚುವುದರಿಂದ ಈ ಮುದುಕರಿಗೆ ಮೀಸೆ ಹಣ್ಣಾಗುವುದಿಲ್ಲ.... ಎಂಬ ನಂಬಿಕೆ.  ನಿಮಗೂ ಹೀಗೆ ಅನಿಸುತ್ತಿದೆಯಾ?


ಅವನೊಬ್ಬ ಮುಂಡೆಗಂಡ.........


                         ಮೊದಲು ಹಿರಿಯರು ಉಪಯೋಗಿಸುತ್ತಿದ್ದ ಶಬ್ಧಗಳೆಂದರೆ ಅಥವಾ ಬೈಗುಳವೆಂದರೆ " ಮುಂಡೆಗಂಡ", " ಮುಂಡೆಮಗನೆ" ಎಂಬುದು ಸಾಮಾನ್ಯವಾದವುಗಳು. ಈ ಬೈಗುಳಗಳನ್ನು ವಿದ್ಯಾವಂತರು, ಕಲಿತವರು, ಮರ್ಯಾದೆಯಿಂದ ಮಹಿಳೆಯರು ಹೆಚ್ಚಾಗಿ ಬಲಸುತ್ತಿದ್ದರು. ಇನ್ನಿತರರು ಬಳಸುತ್ತಿದ್ದುದು " ಬೋ.....ಮಗನೆ, ಸೂ...ಮಗನೆ...." ಇತ್ಯಾದಿಗಳು.
                          ಈ ಶಬ್ಧಗಳಿಗೆ ಅರ್ಥವಿರುವಿದೇನೋ ನಿಜ. ಆದರೆ ಮೇಲೆ ತಿಳಿಸಿದ ಜನರು ತಿಳುವಳಿಕೆಯುಳ್ಳವರಾದ ಕಾರಣ  ನಿಜವಾಗಿ ಅರ್ಥ ಚೆನ್ನಾಗಿ ತಿಳಿದಿರುತ್ತದೆ. ಮುಂಡೆಗೆ ಗಂಡನಾಗುವುದು ಅನೈತಿಕ ಸಂಬಂಧ ಎಂದಾದರೆ ಈ ಜನರಿಗೆ ಹೇಗೆ ತಿಳಿಯಿತು ಇವನು ಮುಂಡೆಗಂಡ ಎಂದು? ಇದನ್ನು ಜನರು ನೋಡಿರಲೇ ಬೇಕಲ್ಲ! ಹೀಗಾಗಿ ಇದು ಅಸೂಯೆಯ ಮಾತೋ , ಬೈಗುಳದ ಮಾತೋ ಅವರಿಗೇ ಗೊತ್ತು?  ಇನ್ನೊಂದು ವಿಷಯವೆಂದರೆ ಸಮಾಜದ  ದೃಷ್ಟಿಯಲ್ಲಿ ಮುಂಡೆಗೆ  ಗಂಡನಾಗುವ ಈ ಅನೈತಿಕನನ್ನು ಯಾಕೆ ತಡೆಯಲಿಲ್ಲ? ಬೈಯ್ಯುವುದಕ್ಕೆ ಉಪಯೋಗವಾಗುತ್ತದೆ ಎಂದು ಅವನನ್ನು ಹಾಗೇ ಬಿಟ್ಟರೇ?

               ಕಾಲ ಬದಲಾಗಿದೆ ಮತ್ತು  ಈ ಬೈಗುಳ ಶಬ್ಧಗಳು ಮೂಲೆ ಸೇರುತ್ತಿವೆ. ಕಾರಣ ತಿಳಿಯುವುದು ಕಷ್ಟ. ಬಹುಶ ಶಬ್ಢಕ್ಕೆ ಅರ್ಥವಿಲ್ಲವೇನೋ ಅಥವಾ ಸಮಾಜ ಪರಿವರ್ತಿತವಾಯಿತೇನೋ ಅಲ್ಲವೇ? ಉತ್ತರ ಯಾರು ಹೇಳುತ್ತೀರಿ?