Wednesday, 26 September 2012

ಈ ವಾಸನೆ ಬೇಕೇ ಬೇಕು!......

                      ನಮ್ಮ ವಠಾರದ ಎದುರು ಮನೆಯಲ್ಲಿ ವಾಸವಾಗಿರೋ ಸೀನನಿಗೆ ಯಾರೋ ವೈದ್ಯರು ಗೋಮೂತ್ರ ಚಿಕಿತ್ಸೆ ನೀಡಿ ಅವನ ದೇಹದ ಅಂದರಿನಲ್ಲಿದ್ದ ಯಾವುದೋ ಕಾಯಿಲೆಯನ್ನು ಗುಣಪಡಿಸಿದ್ದಾರಂತೆ. ಗೋಮೂತ್ರವನ್ನು ಅವರು ಆರು ತಿಂಗಳು ಕಾಲ ಚಿಕಿತ್ಸೆಯಾಗಿ ತೆಗೆದುಕೊಂಡು ಗೋಮೂತ್ರದ ವಾಸನೆಗೆ ಚೆನ್ನಾಗಿ ಒಗ್ಗಿ ಹೋಗಿದ್ದಾರೆ. ಈಗ ಅವರ ಅಂದರಿನ ಕಾಯಿಲೆ ವಾಸಿಯಾಗಿ ಬೇರೆ ರೀತಿಯ ವಾಸನೆ ಕಾಯಿಲೆ ಶುರುವಾಗಿದೆ ಎಂದು ನಮ್ಮ ವಠಾರದವರೂ ಸೇರಿದಂತೆ ಸುತ್ತುಮುತ್ತಲಿನವರೆಲ್ಲಾ ಗುಸುಗುಸು...
   
                     ನಮ್ಮ ಕಾಲೋನಿಯನ್ನ್ಲಿ ಅಲ್ಲಲ್ಲಿ ಕೆಲವರು ಹಸುಗಳನ್ನು ಸಾಕಿದ್ದಾರೆ. ಬೆಳಿಗ್ಗೆ ಹಾಲು ಹಿಂಡಿಕೊಂದು ಹಸುಗಳನ್ನು ಬಿಟ್ಟರೆ ಸಾಯಂಕಾಲವೇ ಹಾಲು ಹಿಂಡಲು ಮನೆಗೆ ಕರೆದುಕೊಳ್ಳುವುದು ಈ ಕಾಲೊನಿಯಲ್ಲಿ ವಾಡಿಕೆ. ಅವು ಅಲ್ಲಲ್ಲಿ ನಿಂತು ಮೂತ್ರ ( ಗಂಜಲ) ವಿಸರ್ಜಿಸಿ ಕೆಸರು ಮಾಡೀರುತ್ತವೆ. ಈ ಗಂಜಲದ ವಾಸನೆ ಕೆಲವು ಬಾರಿ ಗಬ್ಬುನಾತ ಬರುತ್ತಿರುತ್ತದೆ.
                      ಚಿಕಿತ್ಸೆ ನಿಂತು ಎರಡು ತಿಂಗಳಿನ ನಂತರ ಈ ಆಸಾಮಿಗೆ ಒಂದು ಚಟ ಬಂದಿದೆಯಂತೆ. ಗೋಮೂತ್ರ ಸೇವಿಸುವಾಗ ಅದರ ವಾಸನೆಯ ಅಭ್ಯಾಸವಾಗಿ ಆ ಗಂಜಲದ ವಾಸನೆಯಿಲ್ಲದಿದ್ದರೆ ಸರಿಯಾಗಿ ಊಟ ಸೇರುವಿದಿಲ್ಲವಂತೆ ಮತ್ತು ನಿದ್ದೆ ಬರುವುದಿಲ್ಲವಂತೆ.
                     ಇವನು ಯಾರಿಗೂ ಹೇಳದೆ ಹಸುವಿನ ಗಂಜಲವಿರುವ ಸ್ಥಳದಲ್ಲಿ ಬಂದು ಒಂದೈದು ನಿಮಿಷ ನಿಂತು ಗಂಜಲದ ಗಬ್ಬುನಾತವನ್ನು ಆಘ್ರಾಣಿಸಿ ಮನೆಗೆ ಹೋಗಿ ಊಟ ಮಾಡಿ , ಮತ್ತೆ ವಾಕಿಂಗ್ ಅಂತ ನೆಪ ಹೇಳಿ ಮಲಗುವ ಮೊದಲು ಗಂಜಲವಿರುವ ಸ್ಥಳಕ್ಕೆ ಹೋಗಿ ವಾಸನೆ ಹಿಡಿದು ಮನೆಗೆ ಬಂದು ಮಲಗು ನಿದ್ರಿಸುತ್ತಾನಂತೆ. ಈ ವಠಾರದ ಜನರು ಇದನ್ನು ಗಮನಿಸಿಕೊಂಡೇ ಗುಲ್ಲಿಬ್ಬಿಸಿದ್ದಾರೆ...

ಕಣ್ಣಲ್ಲಿ ಕಣ್ಣಿಟ್ಟು.....


                ಮೊನ್ನೆ ನಮ್ಮ ಪಡ್ಡೆ ಹುಡುಗ ಯಾವುದೋ ಒಂದು ಪರ್ಸನಾಲಿಟಿ ಕೋರ್ಸ್ ಗೆ ಹೋಗಿ ಬಂದಿದ್ದ. ಅಲ್ಲಿ ಹೇಳಿಕೊಟ್ಟ ಒಂದು ವಿಷಯ ಎಂದರೆ ಯಾರನ್ನಾದರು ನೀನು ಮಾತನಾಡಿಸುವಾಗ ಅವರ ಕಣ್ಣುಗಳನ್ನು ನೇರವಾಗಿ ನೋಡು ಹಾಗು ನೋಡುತ್ತಲೇ ಮಾತನಾಡು. ಇದರಿಂದ ಬಹಳ ಅನುಕೂಲವಿದೆ. ಪಡ್ಡೆ ಹುಡುಗ ಸ್ವಾರಸ್ಯವಾದ ಈ ವಿಷಯವನ್ನು ಅವನ ಗೆಳೆಯರ ಗುಂಪಿನಲ್ಲಿ ಪ್ರಯೋಗಿಸಿ ವಿಶೇಷ ಅನುಭವ ಪಡೆದಿದ್ದಾನೆ. ಅದು ಆದದ್ದು ಹೀಗೆ...
                        ಹದಿನೈದು ಜನರ ಗುಂಪಿನಲ್ಲಿ ಹೀಗೆ ಯಾವುದೋ ವಿಷಯ ಕುರಿತು ಮಾತುಕತೆ , ಚರ್ಚೆ ನಡೆಯುತ್ತಿತ್ತು. ಗುಂಪಿನಲ್ಲಿ ಹಲವರಿಗೆ ಗಳಸ್ಯ ದೋಸ್ತಿಗಳು, ಇನ್ನು ಕೆಲವರಿಗೆ ಸ್ನೇಹಿತರು ಮಾತ್ರ, ಇನ್ನು ಕೆಲವರಿಗೆ ಅಷ್ಟಕ್ಕಷ್ಟೆ. ಕೊನೆಯ ವರ್ಗದ ಗುಂಪಿನ ಸ್ನೇಹಿತನ ಜೊತೆಗೆ ನಮ್ಮ ಪಡ್ಡೆ ಹುಡುಗ ಯಾವುದೋ ವಿಷಯಕ್ಕೆ ಬಿಸಿಯಾದ ಚರ್ಚೆ ಶುರುವಾಗಿದೆ. ಇದೇ ಸಮಯದಲ್ಲಿ ಈ ಪಡ್ಡೆ ಹುಡುಗ ಎದುರಾಳಿಯ ಕಣ್ಣುಗಳನ್ನೇ ನೋಡುತ್ತಾ ವಾದ ಮಾಡಿದ್ದಾನೆ. ಅವನು " ಏನು ಗುರಾಯಿಸಿ ಮಾತನಾಡುತಾ ಇದ್ದೀಯಾ..ಇನ್ನೊಂದು ಸಲ ಹಾಗೆ ಕಣ್ಣಲ್ಲಿ ಗುರಾಯಿಸಿದರೆ ನೋಡು ನಿನ್ನ ದವಡೆ ಹಲ್ಲುಗಳು ಕಡಿಮೆಯಾಗುತ್ತೆ" ಎಂದು ಹೆದರಿಸಿದ್ದಾನೆ.
                       ಈಗೆ ನಮ್ಮ ಪಡ್ಡೆ ಹುಡುಗನಿಗೆ ಅಳುಕು ಶುರು ಆಗಿಬಿಟ್ಟಿದೆ. ಅಲ್ಲಿ ಕೋರ್ಸ್ ನಲ್ಲಿ ಹೇಳಿದ ಇನ್ನೂ ಹಲವು ವಿಷಯಗಳನ್ನು ಪ್ರಯೋಗಿಸುವುದೋ ಅಥವಾ ಪ್ರಯೋಗಿಸಿ ಮುಖದ ಒಂದೊಂದು ಭಾಗವನ್ನು ವಿಕಾರಗೊಳಿಸುವುದೋ ಎಂದು?
                         ನೀವಾದರೂ ಕಣ್ಣಲ್ಲಿ ಕಣ್ಣಿಟ್ಟು.. ಯಾವಾಗ , ಯಾರ ಹತ್ತಿರ , ಎಲ್ಲಿ, ಎಷ್ಟು ಸಮಯ ನೋಡಬಹುದು ಅಂತ ಸಮಾಧಾನದ ಉತ್ತರ ಹೇಳ್ತೀರ........

Tuesday, 25 September 2012

ತೂಕ ಕಡಿಮೆ ಆಗಲಿಲ್ಲ..ಗುರುವೇ!


ನಮ್ಮ ರಮೇಶನಿಗೆ ಇತ್ತೀಚೆಗೆ ಏನೋ ಗೀಳು ಹತ್ತಿಕೊಂಡಿದೆ. ಏಕೆಂದರೆ ಅವನ ಮನೆಯವರು ಮತ್ತು ಸ್ನೇಹಿತರು " ನೀನು ತೂಕ ಕಡಿಮೆ ಮಾಡಿಕೊಂಡರೆ ಸ್ಮಾರ್ಟ್ ಕಾಣುತ್ತೀಯ , ಒಂದು ಹೆಣ್ಣು ಸಿಗುವವರೆಗಾದರೂ ತೂಕ ಕಡಿಮೆ ಮಾಡಿಕೊಳ್ಳೋ .." ಎಂದು ೮೮ ಕಿಲೋ ತೂಕವಿರುವ ರಮೇಶನಿಗೆ ಕಿವಿಯಲ್ಲಿ ಸಣ್ಣ ಹುಳವನ್ನು ಬಿಟ್ಟಿದ್ದಾರೆ. ಅದಕ್ಕೋಸ್ಕರ ಕೆಲಸ ಪ್ರಾರಂಭವಾಗಿದೆ.

              ಈಗ 3 ತಿಂಗಳಿನಿಂದ ಬೆಳಿಗ್ಗೆ 6 ಗಂಟೆಯಿಂದ 7 ಗಂಟೆಯವರೆಗೆ ಒಬ್ಬನೇ ವಾಕಿಂಗ್ ಪ್ರಾರಂಭಿಸಿದ್ದಾನೆ. ಪ್ರತಿ ದಿನ ಕಷ್ಟಪಟ್ಟು ಅಲಾರಂ ಶಬ್ಧಕ್ಕೆ ಎದ್ದೇಳಿ..ತೂಕವಿಳಿಸುವ ಆಸಕ್ತಿಯಿಂದ ಅಭ್ಯಾಸ ಮಾಡಿದ್ದಾನೆ. ಈ ಒಂದು ಗಂಟೆ ಅವಧಿಯಲ್ಲಿ ಅವನು ಹೋಗುವ ದೂರ ಕೇವಲ 2 ರಿಂದ 3 ಕಿಮಿ, ಅಷ್ಟಕ್ಕೆ ಸುಸ್ತಾಗುತ್ತಾನಂತೆ. ಅದಕ್ಕೆ ಬೆಳಿಗ್ಗೆಯೇ ಬಿಸಿ ಬಿಸಿ ಇಡ್ಲಿ , ವಡೆ ತಿನ್ನುತ್ತಾನಂತೆ. ಅದನ್ನು ತಿಂದು ಕಾಫಿ ಕುಡಿದು ಮನೆಗೆ ಬರುತ್ತಿದ್ದಾನೆ. ಈ ವಿಷಯ ಮನೆಯಲ್ಲಿ ಯಾರಿಗೂ ಹೇಳಿರಲಿಲ್ಲ.

            ಈಗೆ ಅವನಿಗೆ ವಾಕಿಂಗ್ ಗಿಂತ ಬೆಳಿಗ್ಗೆಯ ಇಡ್ಲಿ ವಡೆಯ ರುಚಿಗೆ ಅಲ್ಲಿಗೆ ಹೋಗುವಂತಾಗಿದೆಯಂತೆ. ಮೊನ್ನೆ ಯಾವಾಗಲೋ ತೂಕ ನೋಡಿಕೊಂಡವನು ಗಾಬರಿಯಾಗಿದ್ದಾನೆ. ೯೫ ಕಿಲೊಗೆ ತೂಕದಲ್ಲಿ ಮುಳ್ಳು ನಿಂತುಬಿಟ್ಟಿದೆ. ವಾಕಿಂಗ್ ಮಾಡಿದ್ದರಿಂದನೇ ತೂಕ ಜಾಸ್ತಿಯಾಯಿತು ಇಂದು ತರ್ಕ ಮಾಡುತ್ತಿದ್ದಾನೆ. ಇನ್ನು ಮುಂದೆ ವಾಕಿಂಗ್ ಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದಾನೆ.

             ಗುರುವೇ !.. ಇವನಿಗೆ ಜಿಮ್ ವಿಳಾಸ ತಿಳಿಸಿ ಹಾಗು ಅಲ್ಲಿರುವ ಹೋಟೆಲ್ , ಜ್ಯೂಸ್ ,ಇತರೆ ಪಾನಿಯ ದೊರಕುವ ವಿವರವನ್ನು ಕೊಡಿ, ಎರಡೂ ಕಡೆ ಚೆನ್ನಾಗಿ ವ್ಯಾಪಾರ ಪ್ರತಿದಿನ ಖಡ್ಡಾಯವಾಗಿ ಆಗುತ್ತದೆ.

Friday, 3 August 2012

ಬಾಡಿ ಕೊಡಿ

            ದಕ್ಷಿಣ ಕರ್ನಾಟಕದ ಕೆಲವು ಭಾಗಗಳಲ್ಲಿ ಈಗಲೂ ಜನರು ಸ್ನಾನ ಮಾಡಿದ ಮೇಲೆ ಬಾಡಿ ಹಾಕಿಕೊಳ್ಳುತ್ತಾರೆ. ಗಂಡಸರೂ, ಹೆಂಗಸರೂ ಇಬ್ಬರೂ ಸ್ನಾನದ ನಂತರ ಬೇರೆ ಬೇರೆ ಬಾಡಿ ಧರಿಸುತ್ತಾರೆ.
            

       ಆಶ್ಚರ್ಯವಾಗಿದೆಯೇ! ಸ್ನಾನ ಮಾಡುವಾಗ ಬಾಡಿ ಕರಗಿ ಹೋಗಿ ಮತ್ತೆ ಬಾಡಿ ಪಡೆಯುತ್ತಾರಾ ಎಂದು ಯೋಚಿಸುತ್ತಿರುವಿರೇನು? ಇದೇನು ಸತ್ತ ನಂತರ ಆತ್ಮವು ಬೇರೆ ಬಾಡಿಯನ್ನು ಪಡೆಯುವುದಲ್ಲ.


              ನನಗೂ ಹೀಗೆ ನಮ್ಮ ನೆಂಟರೊಬ್ಬರ ಮನೆಗೆ ಹೋದಾಗ ಸ್ನಾನ ಮಾಡಿದ ನಂತರ ನನ್ನ ಭಾವ ಅವರ ಅಮ್ಮನನ್ನು ಕರೆದು " ಅಮ್ಮ ನನ್ನ ಬಾಡಿ ಕೊಡು " ಎಂದ. ಅವರಮ್ಮ ಅವನಿಗೆ ಬನಿಯನ್ ತಂದುಕೊಟ್ಟರು. ಆಮೇಲೆ ತಿಳಿಯಿತು ಅವನು ಕೇಳಿದ ಬಾಡಿ , ಬನಿಯನ್ ಎಂದು ಮತ್ತೂ ಕುತೂಹಲವೆಂದರೆ ಹೆಂಗಸರೂ ಕೂಡ ಬಾಡಿ ಹಾಕ್ಕೊತ್ತಾರಂತೆ! ಆಮೇಲೆ ತಿಳಿದಿದ್ದು ಹೆಂಗಸರ ಮೇಲಿನ ಒಳಉಡುಪು ( ಬ್ರಾ) ಕೂಡ ಬಾಡಿ ಎಂದು.

           ಗಂಡಸರ ಬಾಡಿ ಹೆಂಗಸರ ಬಾಡಿ ಬೇರೆ ಬೇರೆಯಾದರೂ ಅದು ಸ್ನಾನವಾದ ನಂತರ ಮಾತ್ರ ಕೇಳಬಹುದು. ಮಿಕ್ಕ ಸಮಯದಲ್ಲಿ ಬೇರೆ ಯಾರನ್ನಾದರೂ ಬಾಡಿ ಕೇಳಿದರೆ ಅರ್ಥ ಬದಲಾಗಿ ಮುಖ ಊದಿಕೊಳ್ಳುವ ಹಾಗೆ ಹೊಡೆಯುತ್ತಾರೆ.

Wednesday, 25 July 2012

ಗಜ ಸೀರೆ

                              ಅಂಗಡಿಯಲ್ಲಿ ನನ್ನ ಹೆಂಡತಿ ಸೀರೆ ಖರೀದಿ ಮಾಡುತ್ತಿರುವಾಗ ಇನ್ನೊಬ್ಬ ಹೆಂಗಸು "ಸೀರೆಯಲ್ಲೇ ಬ್ಲೌಸ್ ಪೀಸ್ ಇರೋದು ಕೊಡಿ" ಎಂದು ಅಂಗಡಿಯವನನ್ನು ಕೇಳುತ್ತಿದ್ದಳು. ಅದೇನು ಆಶ್ಚರ್ಯವಲ್ಲ ಬಿಡಿ. ಆದರೆ ಆಕೆಯ ಜಾಣ್ಮೆಯನ್ನು ನಾನು ಮೆಚ್ಚಿದೆ. ಏಕೆಂದರೆ ಅವಳು ಕೇಳುತ್ತಿದ್ದುದು ಬ್ಲೌಸ್ ಪೀಸ್ ಕೂಡ ಸೀರೆ ತರನೇ ಇರಬೇಕು, ಬೇರೆ ಅಲಂಕಾರ ಇರಬಾರದು ಎಂದು. ಅವಳು ತೀರ ಸಪೂರವಾಗಿದ್ದಳು( ಸಣ್ಣಗಿದ್ದಳು).

 

                           ನನ್ನ ತಲೆಯಲ್ಲಿ ಹೊಳೆಯುತ್ತಿದೆ ಒಂದು ವಿಷಯ. ಹೇಗಿದ್ದರೂ ಇವಳು ಐದಾರು ವರ್ಷಗಳಲ್ಲಿ ದಪ್ಪವಾಗಿ, ಆಕಾರ ದೊಡ್ಡದಾಗಿ ಬದಲಾಗುತ್ತದೆ. ಆಗ ಸೀರೆಗೆ ಹೊಂದುವ ಬೌಸ್ ಹೊಲಿಸಬಹುದು, ಆದರೆ ಸೀರೆ ಉಡುವುದಕ್ಕೆ ಸರಿಹೋಗುವುದಿಲ್ಲವೇ? ಅದಕ್ಕೆ ಎಕ್ಸಟ್ರಾ ಬಟ್ಟೆಯೂ ಹಾಗೆ ಬಿಟ್ಟರೆ ಮುಂದಿನ ದಿನಗಳಲ್ಲಿ ಅದೇ ಸೀರೆಯನ್ನು ಪದೇ ಪದೇ ಉಡಬಹುದಲ್ಲ ಎಂದು? ಇಲ್ಲದಿದ್ದರೆ ಡ್ರಮ್ ಗೆ ಸೀರೆ ಸುತ್ತಿಕೊಂಡ ಹಾಗೆ ಹೋಗಬೇಕಾಗುತ್ತದೆ ಎಂಬ ಮುಂದಾಲೋಚನೆಗೆ.....ಜೈ ಎನ್ನಬೇಕು ಅಲ್ಲವೇ !

Sunday, 15 July 2012

ಮಾನ ಕಳೆದುಕೊಳ್ಳಬೇಡಿ

                       ಸ್ನೇಹಿತನ ಮನೆಯಲ್ಲಿ ನಾವೆಲ್ಲ ಆರು ಗೆಳೆಯರು ಒಟ್ಟಾಗಿ ಸೇರಿ ಹರಟುತ್ತಿದ್ದೆವು. ಮೂರು ವರ್ಷ ವಯಸ್ಸಿನ ಗೆಳೆಯನ ಮಗನೊಬ್ಬನನ್ನು ಇನ್ನೊಬ್ಬ ಗೆಳೆಯ ಹುಡುಗನನ್ನು ಬಾಚಿಕೊಂಡು ತಬ್ಬಿ ಕೆನ್ನೆಗೆ ಮುತ್ತನ್ನಿಟ್ಟ. ಅದೇನೂ ವಿಶೇಷ ಅಲ್ಲ ಬಿಡಿ. ಇಬ್ಬರು ನಕ್ಕರು. ಹುಡುಗ ಅವರ ತಂದೆಯ ಬಳಿ ಹೋಗಿ ಕಿವಿಯಲ್ಲಿ ಏನನ್ನೋ ಗುಟ್ಟಾಗಿ ಹೇಳಿದ. ಅವರಪ್ಪ ಹೌದಾ ... ಎಂದು ಸುಮ್ಮನಾದರು. ಆದರೆ ಮುತ್ತನ್ನಿಟ್ಟ ವ್ಯಕ್ತಿಗೆ ಏನೋ ಕುತೂಹಲ. ಹುಡುಗೆ ಎನೋ ನನ್ನ ಬಗ್ಗೆ ಹೇಳಿದ್ದಾನೆ ಎಂದು. ತಿಳಿಯುವ ತವಕ. ಬಹಳ ಬಲವಂತವಾಗಿ ಪೀಡಿಸಿ ಹುಡುಗ ಏನು ಹೇಳಿದ ಎಂದು ಹೇಳುವಂತೆ ಒತ್ತಾಯ ಮಾಡಿದರು.

             ಅವರು ಕೊನೆಗೂ ಎಲ್ಲರೆದುರೂ ಬಾಯಿಬಿಟ್ಟರು. " ನಿಮ್ಮ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿತ್ತು..ಅಸಯ್ಯವಾಗಿತ್ತು ".

           ಈಗ ಎಲ್ಲರ ಮುಂದೆ ಮಾನ ಕಳೆದುಕೊಂಡ ಗೆಳೆಯನಿಗೆ ಹೇಗಾಗಿರಬೇಡ!


     ಎಚ್ಚರಿಕೆ- ಮಕ್ಕಳು ತಂದೆತಾಯಿ ಕಿವಿಯಲ್ಲಿ ಏನಾದರೂ ಗುಟ್ಟು ಹೇಳಿದಾಗ ಒತ್ತಾಯ ಮಾಡಿ ಏನು ಹೇಳಿದರು ಎಂದು ಕೇಳಬೇಡಿ. ಯಾರಿಗೆ ಗೊತ್ತು ? ಅವರು ಬಾಯಿಬಿಟ್ಟರೆ ನಿಮ್ಮ ಮಾನ ಹೋಗಬಹುದೇನೋ?..?

Wednesday, 11 July 2012

ನಿರುದ್ಯೋಗಿ ಮೊಟ್ಟೆಯೇ ?


              ಮೊನ್ನೆ ಬೆಂಗಳೂರಿನ ಒಂದು ಜನಪ್ರಿಯ ಬಡಾವಣೆಯಲ್ಲಿ ( ಹನುಮಂತನಗರ ಸಮೀಪ) ಗಾಡಿ ಓಡಿಸುತ್ತಿದ್ದಾಗ ರಸ್ತೆಯ ಒಂದು ಅಂಗಡಿಯ ಮುಂದಿನ ಬೋರ್ಡ್ ಗಮನ ಸೆಳೆಯಿತು. ಬೋರ್ಡ್ ನ್ನು ಬಹಳ ದೊಡ್ಡದಾಗಿಯೇ ಬರೆಸಿದ್ದರು. ಅದು ಹೀಗೆ ಬರೆದಿತ್ತು.

                            

                          " ನಿರುದ್ಯೋಗ ಯುವಕರ ಮೊಟ್ಟೆ ಮಾರಾಟ ಕೇಂದ್ರ "


ಈಗ ನೀವು ಹೇಳಿ ಮೊದಲ ಭಾಗ ನಿರುದ್ಯೋಗಿ ಯುವಕರು ಮತ್ತು ಎರಡನೆಯ ಭಾಗ ಮಾರಾಟ ಕೇಂದ್ರ.

ಸಮಸ್ಯೆಯೆಂದರೆ - ನಿರುದ್ಯೋಗಿ ಯುವಕರು ಹೇಗೆ ಮೊಟ್ಟೆ ಇಟ್ಟರು ? (ತೀರ ವಿಲಕ್ಷಣ ವಿಷಯ) ನಿರುದ್ಯೋಗಿ ಯುವಕರು ಮಾತ್ರ ಹೇಗೆ ಮೊಟ್ಟೆ ಇಡಲು ಸಾಧ್ಯ?

ಅವರು ಮೊಟ್ಟೆ ಮಾರಾಟ ಮಾಡಿದರೆ ಅದು ಹೇಗೆ ನಿರುದ್ಯೋಗಿಗಳಾಗುತ್ತಾರೆ?
ಮಾರಾಟ ಒಂದು ಉದ್ಯೋಗವಲ್ಲವೇ?

ಎಲ್ಲರೂ ಮೊಟ್ಟೆ ಇಡುತ್ತಾರೆ ಎಂದು ಕೇಳಿದ್ದೇವೆ. ಅದು ಯಾವಾಗಯೆಂದರೆ ಅವರ ಹೊಟ್ಟೆಯಲ್ಲಿ ಜಂತು ಹುಳುಗಳ ಭಾದೆ ಜಾಸ್ತಿಯಿದ್ದಾಗ.

ಆದರೆ ನನಗಂತೂ ಕಂಡಿದ್ದು ಆ ಅಂಗಡಿಯಲ್ಲಿ ಕೋಳಿ ಮೊಟ್ಟೆಗಳ ಸಾಲುಗಳು!

ಮುಖವೋ ತಲೆಯೋ !

                  ನಮ್ಮ ಎದುರು ಮನೆಯ ಮೂವತ್ತು ವರ್ಷ ವಯಸ್ಸಿನ ರಂಗನಿಗೆ ಇರೋದು ಅರ್ಧ ಬಾಂಡ್ಲೆ ತಲೆ. ನಮ್ಮ ಮೂರನೆ ಕ್ಲಾಸ್ ಓದೋ ಹುಡುಗನಿಗೆ ಒಂದು ಡೌಟ್ ಬಂದಿದೆ. ರಂಗ ಅಂಕಲ್ ಮುಖ ತೊಳೆಯೋದಿದ್ದರೆ ಎಲ್ಲಿವರೆಗೂ ತೊಳೀಬೇಕು? ಯಾಕೆಂದರೆ ಅವರ ಟೀಚರ್ ಹೇಳಿದ್ದಾರೆ ಮುಖ ತಲೆ ಅಂತ ಬೇರ್ಪಡಿಸುವುದು ತಲೆಯ ಕೂದಲು ಪ್ರಾರಂಭವ ಜಾಗದಿಂದ.

ಈಗ ಸಮಸ್ಯೆ ರಂಗನಿಗೆ ಮುಖವಿರುವುದು ತಲೆಯ ಅರ್ಧ ಭಾಗದವರೆಗೆ. ಹಾಗಿದ್ದರೆ ಪ್ರತಿ ಸಲ ರಂಗ ಮುಖ ತೊಳೆದಾಗಲು ಅರ್ಧ ತಲೆ ತೊಳೆದಂತಾಗುತ್ತದೆ !
 ನೀವೇಕೆ ನಿಮ್ಮ ತಲೆ ಮೇಲೆ ಕೈ ಇಟ್ಟುಕೊಂಡಿರಿ?