Monday 24 November 2014

ಮುದುಕರಾದರೂ ಮೀಸೆ ಹಣ್ಣಾಗುವುದಿಲ್ಲ....

            ಒಂದು ಗಾದೆ ಮಾತಿನಂತೆ " ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ " ಎಂದು. ಇದು ಕುಸ್ತಿ ಮಾಡುವ ಜಟ್ಟಿಯ ಚಾಕ್ಯತೆ, ಚಾಣಾಕ್ಷತನವನ್ನು ತೋರಿಸುತ್ತಿತ್ತು. ಕಾಲ ಬದಲಾಗಿದೆ ಜಟ್ಟಿಯು ಮೀಸೆ ಬಿಡುವುದಿಲ್ಲ ಬದಲಿಗೆ ಮೀಸೆಯನ್ನು ನುಣ್ಣಗೆ ಕ್ಷೌರ ಮಾಡಿಸುತ್ತಾನೆ ಮತ್ತು ಮಣ್ಣಿನ ವಾಸನೆಯೇ ಕುಸ್ತಿಯಲ್ಲಿಲ್ಲ. ಈಗ ಹಲಗೆಗಳ ರಂಗ ಮಂಚ ಅಥವಾ ಬಟ್ಟೆಯ ಮಂಚದ ಜಾಗ. ಇನ್ನೂ ಕೆಲವು ವರ್ಷಗಳಲ್ಲಿ ಈ ಗಾದೆಯ ಮಾತು ಉಪಯೋಗಕ್ಕೆ ಬರುವುದಿಲ್ಲ ಎನ್ನೋಣ.

               ಆದರೆ ಮತ್ತೊಂದು ರೀತಿಯಲ್ಲಿ ಈ ಗಾದೆಗೆ ಸೇರಿಸಿಕೊಳ್ಳಬಹುದು. ಅದೇನೆಂದರೆ " ಮುದುಕರಾದರೂ  ಮೀಸೆ ಹಣ್ಣಾಗುವುದಿಲ್ಲ..." ಎಂದು. ಕಾರಣವೇನೆಂದರೆ ಸುಲಭವಾಗಿ ಎಲ್ಲಾ ಅಂಗಡಿಗಳಲ್ಲೂ ಕಡಿಮೆ ದರದಲ್ಲಿ ಎಲ್ಲರಿಗೂ ದೊರೆಯುವ ಕೂದಲಿಗೆ ಹಚ್ಚುವ ಬಣ್ಣಗಳು ಮತ್ತು ಸುದೀರ್ಘವಾಗುತ್ತಿರುವ ಆಯಸ್ಸು. ಇವೆರಡಕ್ಕೂ ರಸಿಕತೆ ಸ್ವಲ್ಪ ಇರಲೇಬೇಕು ಎನ್ನಿ. ತಲೆಯಲ್ಲಿ  ಶೇಕಡ ಎಂಬತ್ತರಷ್ಟು ಕೂದಲುಗಳು ಮಾಯವಾಗಿ ಬಟ್ಟ ಬಯಲಾದ ಮುದುಕರಲ್ಲೂ ಕೂಡ ಮೂಗಿನ ಕೆಳಗೆ ದಪ್ಪಗೆ ಮೀಸೆಯಂತೂ ರಾರಾಜಿಸುತ್ತದೆ. ಈ  ಮೀಸೆಯನ್ನು ಆರೈಕೆ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ ಆದರೆ ಅಂದವಾಗಿ ಕಾಣಲು ರಸಿಕತೆ ಬೇಕೇಬೇಕು.

             ಹಲವು ಯುವಕ ಮುದುಕರೂ ಹಾಗೂ ಹಣ್ಣಾದ ಮುದುಕರೂ ಕೂಡ ಮೀಸೆಯು ಬೆಳ್ಳಗೆ ಕಾಣಲು ಇಷ್ಟ ಪಡುವುದಿಲ್ಲ. ಈ ಕಾರಣದಿಂದ ಮೀಸೆಗೆ ಬಣ್ಣ ಹಚ್ಚುವುದರಿಂದ ಈ ಮುದುಕರಿಗೆ ಮೀಸೆ ಹಣ್ಣಾಗುವುದಿಲ್ಲ.... ಎಂಬ ನಂಬಿಕೆ.  ನಿಮಗೂ ಹೀಗೆ ಅನಿಸುತ್ತಿದೆಯಾ?


ಅವನೊಬ್ಬ ಮುಂಡೆಗಂಡ.........


                         ಮೊದಲು ಹಿರಿಯರು ಉಪಯೋಗಿಸುತ್ತಿದ್ದ ಶಬ್ಧಗಳೆಂದರೆ ಅಥವಾ ಬೈಗುಳವೆಂದರೆ " ಮುಂಡೆಗಂಡ", " ಮುಂಡೆಮಗನೆ" ಎಂಬುದು ಸಾಮಾನ್ಯವಾದವುಗಳು. ಈ ಬೈಗುಳಗಳನ್ನು ವಿದ್ಯಾವಂತರು, ಕಲಿತವರು, ಮರ್ಯಾದೆಯಿಂದ ಮಹಿಳೆಯರು ಹೆಚ್ಚಾಗಿ ಬಲಸುತ್ತಿದ್ದರು. ಇನ್ನಿತರರು ಬಳಸುತ್ತಿದ್ದುದು " ಬೋ.....ಮಗನೆ, ಸೂ...ಮಗನೆ...." ಇತ್ಯಾದಿಗಳು.
                          ಈ ಶಬ್ಧಗಳಿಗೆ ಅರ್ಥವಿರುವಿದೇನೋ ನಿಜ. ಆದರೆ ಮೇಲೆ ತಿಳಿಸಿದ ಜನರು ತಿಳುವಳಿಕೆಯುಳ್ಳವರಾದ ಕಾರಣ  ನಿಜವಾಗಿ ಅರ್ಥ ಚೆನ್ನಾಗಿ ತಿಳಿದಿರುತ್ತದೆ. ಮುಂಡೆಗೆ ಗಂಡನಾಗುವುದು ಅನೈತಿಕ ಸಂಬಂಧ ಎಂದಾದರೆ ಈ ಜನರಿಗೆ ಹೇಗೆ ತಿಳಿಯಿತು ಇವನು ಮುಂಡೆಗಂಡ ಎಂದು? ಇದನ್ನು ಜನರು ನೋಡಿರಲೇ ಬೇಕಲ್ಲ! ಹೀಗಾಗಿ ಇದು ಅಸೂಯೆಯ ಮಾತೋ , ಬೈಗುಳದ ಮಾತೋ ಅವರಿಗೇ ಗೊತ್ತು?  ಇನ್ನೊಂದು ವಿಷಯವೆಂದರೆ ಸಮಾಜದ  ದೃಷ್ಟಿಯಲ್ಲಿ ಮುಂಡೆಗೆ  ಗಂಡನಾಗುವ ಈ ಅನೈತಿಕನನ್ನು ಯಾಕೆ ತಡೆಯಲಿಲ್ಲ? ಬೈಯ್ಯುವುದಕ್ಕೆ ಉಪಯೋಗವಾಗುತ್ತದೆ ಎಂದು ಅವನನ್ನು ಹಾಗೇ ಬಿಟ್ಟರೇ?

               ಕಾಲ ಬದಲಾಗಿದೆ ಮತ್ತು  ಈ ಬೈಗುಳ ಶಬ್ಧಗಳು ಮೂಲೆ ಸೇರುತ್ತಿವೆ. ಕಾರಣ ತಿಳಿಯುವುದು ಕಷ್ಟ. ಬಹುಶ ಶಬ್ಢಕ್ಕೆ ಅರ್ಥವಿಲ್ಲವೇನೋ ಅಥವಾ ಸಮಾಜ ಪರಿವರ್ತಿತವಾಯಿತೇನೋ ಅಲ್ಲವೇ? ಉತ್ತರ ಯಾರು ಹೇಳುತ್ತೀರಿ?